ಕೊರೊನಾ ವೈರಸ್ ಎರಡನೇ ಅಲೆ ದೇಶಾದ್ಯಂತ ಜೋರಾಗಿರುವ ಕಾರಣ ಬಹುತೇಕ ಕಡೆ ಲಾಕ್ಡೌನ್ ಜಾರಿ ಮಾಡಲಾಗಿದೆ. ಸಿನಿಮಾ, ಧಾರಾವಾಹಿ ಶೂಟಿಂಗ್ಗಳು ಸ್ಥಗಿತಗೊಂಡಿರುವುದರಿಂದ ಸೆಲೆಬ್ರಿಟಿಗಳು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದಿದೆ. ಸದಾ ಕಾಲ ಶೂಟಿಂಗ್ನಲ್ಲಿ ಬ್ಯುಸಿ ಆಗಿರುತ್ತಿದ್ದ ನಟ-ನಟಿಯರು ಇಷ್ಟು ದಿನ ಫ್ಯಾಮಿಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಈಗ ಅವರಿಗೆ ಕುಟುಂಬದವರ ಜೊತೆ ಕಾಲ ಕಳೆಯಲು ಸಮಯ ಸಿಕ್ಕಿದೆ. ಕೆಲವರು ತಮ್ಮ ತೋಟದ ಮನೆಗೆ ತೆರಳಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ನಟಿ ಆಶಿಕಾ ರಂಗನಾಥ್ ಕೂಡ ಹಳ್ಳಿ ಪರಿಸರದಲ್ಲಿ ಕಾಲ ಕಳೆಯುತ್ತಿದ್ದಾರೆ.
ಕನ್ನಡದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಆಶಿಕಾ ರಂಗನಾಥ್ ಅವರ ಕೈಯಲ್ಲಿ ‘ಅವತಾರ ಪುರುಷ’, ‘ರೇಮೋ’, ‘ಮದಗಜ’ ಮುಂತಾದ ಸಿನಿಮಾಗಳಿವೆ. ಆದರೆ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಈ ಎಲ್ಲ ಸಿನಿಮಾಗಳ ಕೆಲಸಗಳಿಗೆ ಬ್ರೇಕ್ ಹಾಕಲಾಗಿದೆ. ಈ ನಡುವೆ ಆಶಿಕಾ ಮಾವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಬಂಧಿಕರ ತೋಟಕ್ಕೆ ತೆರಳಿ, ಸಾವಯವ ಕೃಷಿ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ಹೆಚ್ಚು ಆಯಕ್ಟೀವ್ ಆಗಿರುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ 13 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅವರು, ತಮ್ಮ ಅಭಿಮಾನಿಗಳಿಗಾಗಿ ಏನಾದರೂ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ತಮ್ಮ ಲಾಕ್ಡೌನ್ ದಿನಚರಿಯ ಬಗ್ಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಸಂಬಂಧಿಕರ ತೋಟದಲ್ಲಿ ಅವರು ಎಲ್ಲರ ಜೊತೆ ಖುಷಿಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಅಜ್ಜ, ಅಜ್ಜಿ ಮತ್ತು ಕಸಿನ್ಸ್ ಜೊತೆ ಇರಲು ಸಮಯ ಸಿಕ್ಕಿರುವುದಕ್ಕೆ ಆಶಿಕಾ ಸಂತಸಪಡುತ್ತಿದ್ದಾರೆ.