ಬೆಳಗಾವಿ: ED ಹೆಸರಲ್ಲಿ ಬ್ಯಾಂಕ್‍ಗಳಿಗೆ ನಕಲಿ ಪತ್ರಗಳನ್ನು ಕಳುಹಿಸುತ್ತಿದ್ದ ಖತರ್ನಾಕ್ ವಂಚಕನೊಬ್ಬನನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಮದುಕರ್ ಸಪಳೆ ಬಂಧಿತ ಆರೋಪಿ.
ಬೆಳಗಾವಿಯ ಶಾಸ್ತ್ರೀನಗರದ ನಿವಾಸಿಯಾದ ಆರೋಪಿ ಖಾಸಗಿ ಇನ್ಶೂರೆನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇವನ ಬಳಿ ಬರುವ ಗ್ರಾಹಕರಿಗೆ ಬಣ್ಣ, ಬಣ್ಣದ ಮಾತುಗಳನ್ನ ಹೇಳಿ ಅವರ ಇನ್ಶೂರೆನ್ಸ್ ಹಣವನ್ನ ತನ್ನ ಅಕೌಂಟ್ಗೆ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದ ಅನ್ನೋ ಆರೋಪ ಕೇಳಿ ಬಂದಿದೆ.
ಹಣ ಕಳೆದುಕೊಂಡವರು ಬಂದು ಹಣ ಕೇಳಿದರೆ ED ಹೆಸರಲ್ಲಿ ಬ್ಯಾಂಕ್‍ಗೆ ನಕಲಿ ಪತ್ರಗಳನ್ನು ಕಳುಹಿಸಿ ಅವರ ಅಕೌಂಟ್ ಸೀಜ್ ಆಗುವಂತೆ ಮಾಡುತ್ತಿದ್ದ. ಆತ ಕಳಿಸುತ್ತಿದ್ದ ಪತ್ರ ಎಷ್ಟರ ಮಟ್ಟಿಗಿರುತ್ತಿತ್ತು ಎಂದರೆ ಇದು ED ಪತ್ರವೇ ಎಂದು ಬ್ಯಾಂಕ್ ಅಧಿಕಾರಿಗಳು ನಂಬಿ ತನ್ನ ಗ್ರಾಹಕರ ಅಕೌಂಟ್ಗಳನ್ನ ಸ್ಥಗಿತಗೊಳಿಸುತ್ತಿದ್ದವು ಎನ್ನಲಾಗಿದೆ.
ಇದೇ ರೀತಿ ಈ ಆಸಾಮಿ ಯೂನಿಯನ್ ಬ್ಯಾಂಕ್‍ಗೆ 3 ನೋಟಿಸ್, ಐಡಿಬಿಐ ಬ್ಯಾಂಕ್‍ಗೆ 1 ನೋಟಿಸ್, ಎಸ್‍ಬಿಐ ಬ್ಯಾಂಕಿಗೆ 1 ನೋಟಿಸ್, ಖಾನಾಪುರದ ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್‍ಗೆ 1 ನೋಟಿಸ್, ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ 1 ನೋಟಿಸ್ ನೀಡಿದ್ದಾನೆ. ಇದಷ್ಟೇ ಅಲ್ಲ, ಜಿಲ್ಲಾ ಸತ್ರ ನ್ಯಾಯಾಧೀಶರ ಹೆಸರು ಮತ್ತು ಕೆಲವು ಪ್ರತಿಷ್ಠಿತ ವಕೀಲರ ಹೆಸರನ್ನು ನಮೂದಿಸಿ ನಕಲಿ ಕೌನ್ಸಿಲೇಶನ್(ಲೀಗಲ್) ನೋಟಿಸ್‍ಗಳನ್ನು ಬ್ಯಾಂಕ್‍ಗಳಿಗೆ ಕಳಿಸಿರುವ ಆರೋಪ ಕೇಳಿ ಬಂದಿದೆ.
ಗ್ರಾಹಕರ ಅಕೌಂಟ್ಗಳನ್ನ ಸ್ಥಗಿತಗೊಳಿಸಿದ ನಂತರ ಕೆಲವು ಬ್ಯಾಂಕ್ಗಳು ED ಕಚೇರಿಗೆ ಮೇಲ್ ಮಾಡುತ್ತಿದ್ದವು. ಅದಕ್ಕೆ ನಾವು ನಿಮಗೆ ಯಾವುದೇ ಪತ್ರ ಕಳಿಸಿಲ್ಲ ಅಂತ ಕಚೇರಿಯಿಂದ ಪ್ರತ್ಯುತ್ತರ ಬರುತ್ತಿತ್ತು. ಇದರಿಂದ ಗೊಂದಲಕ್ಕೊಳಗಾದ ಬ್ಯಾಂಕ್ ಅಧಿಕಾರಿಗಳು, ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಆರೋಪಿ ಸಿಕ್ಕಿಹಾಕಿಕೊಂಡಿದ್ದಾನೆ.
ಈ ಬಗ್ಗೆ ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಮಾತನಾಡಿ. ಇತ ತನ್ನ ಇನ್ಶೂರೆನ್ಸ್ ಕಂಪನಿಯಲ್ಲಿ ಅವಧಿ ಮುಗಿದ ಪಾಲಿಸಿದಾರರಿಂದ ಬರೊಬ್ಬರಿ 26 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಬಂಧಿತ ಆರೋಪಿಯಿಂದ ನಕಲಿ ಸ್ಟಾಂಪ್ ತಯಾರು ಮಾಡುವ ಮಷಿನ್, ಪ್ರಿಂಟರ್, ಒಂದು ಇನೋವಾ ಕಾರು, ಒಂದು ಸ್ವಿಪ್ಟ್ ಡಿಸೈರ್ ಕಾರನ್ನ ವಶಕ್ಕೆ ಪಡೆದುಕೊಂಡಿದ್ದೇವೆ. ಈ ಸಂಬಂಧ ಬೆಳಗಾವಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಅಂತಾ ತಿಳಿಸಿದ್ದಾರೆ.
Laxmi News 24×7