ಹೈದರಾಬಾದ್: ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಜರಾಗುವುದು ಸಾಂವಿಧಾನಿಕ ಪ್ರಮಾಣವನ್ನು ಉಲ್ಲಂಘಿಸಿದಂತೆ ಎಂದು ಅಖಿಲ ಭಾರತ ಮಜ್ಲಿಸ್-ಇ-ಇಥೆಹಾದುಲ್ ಮುಸ್ಮಿಮಿನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಆಗಸ್ಟ್ 5 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ವರದಿ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಓವೈಸಿ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.
“ಕರ್ತವ್ಯದಲ್ಲಿದ್ದಾಗ ಪ್ರಧಾನಮಂತ್ರಿಗಳು ಭೂಮಿ ಪೂಜೆಗೆ ಹಾಜರಾದರೆ ಅದು ಸಾಂವಿಧಾನಿಕ ಪ್ರಮಾಣವಚನದ ಉಲ್ಲಂಘನೆಯಾದಂತೆ. ಜಾತ್ಯತೀತತೆಯು ಸಂವಿಧಾನದ ಮೂಲ ರಚನೆಯ ಒಂದು ಭಾಗವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
1992ರಲ್ಲಿ ಕ್ರಿಮಿನಲ್ ಜನಸಮೂಹದಿಂದ ನೆಲಸಮಗೊಳ್ಳುವ ಮೊದಲು 400 ವರ್ಷಗಳ ಕಾಲ ಬಾಬರಿ ಮಸೀದಿ ಅಯೋಧ್ಯೆಯಲ್ಲಿತ್ತು ಎನ್ನುವುದನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಓವೈಸಿ ಹೇಳಿದ್ದಾರೆ.
ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ದೇವಾಲಯದ ಭೂಮಿ ಪೂಜೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಚಿತಪಡಿಸಿದ್ದಾರೆ.
ಒವೈಸಿ ಅವರ ಹೇಳಿಕೆಗೆ ಬಿಜೆಪಿ ವಕ್ತಾರ ನಲಿನ್ ಕೊಹ್ಲಿ, ಇತ್ತೀಚಿನ ದಿನಗಳಲ್ಲಿ ಒವೈಸಿ ಅವರು ಹೇಳಿಕೆ ನೀಡುವ ಮೂಲಕ ರಾಮ ದೇವಾಲಯದ ಬಗ್ಗೆ ವಿವಾದವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ಧರ್ಮದ ಬಗ್ಗೆ ರಾಜಕೀಯ ಮಾಡಲು ಓವೈಸಿ ಪ್ರಯತ್ನಿಸುತ್ತಿರುವುದು ನಮಗೆ ತಿಳಿದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ರಾಮ್ ದೇವಾಲಯದ ಭೂಮಿ ಪೂಜೆಗೆ ಆಗಸ್ಟ್ 5ರಂದು ಅಯೋಧ್ಯೆಗೆ ಬರಲು ಪ್ರಧಾನಿ ಒಪ್ಪಿಕೊಂಡಿದ್ದಾರೆ. ಅವರು ಒಂದೂವರೆ ಗಂಟೆಗಳ ಕಾಲ ಅಲ್ಲಿಯೇ ಇರುತ್ತಾರೆ. ಭೂಮಿ ಪೂಜೆಗೂ ಮೊದಲು ರಾಮ್ ಲಲ್ಲಾಗೆ ಭೇಟಿ ನೀಡುತ್ತಾರೆ ಎಂದು ಶ್ರೀರಾಮ ಮಂದಿರದ ಟ್ರಸ್ಟಿ ಸ್ವಾಮಿ ಗೋವಿಂದ ದೇವಗಿರಿ ತಿಳಿಸಿದ್ದಾರೆ.
ಈ ಮೊದಲು ಅವರು ಪ್ರಧಾನಿ ಆನ್‌ಲೈನ್‌ನಲ್ಲಿ ಭೂಮಿ ಪೂಜೆ ಮಾಡಲು ನಿರ್ಧರಿಸಿದ್ದರು. ಆದರೆ ನೀವೇ ಖುದ್ದಾಗಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ನಾನು ಮನವಿ ಮಾಡಿದ್ದೆ. ನಂತರ ನನ್ನ ಮನವಿಯನ್ನು ಒಪ್ಪಿಕೊಂಡರು. ಮೋದಿಜೀ ಅವರು ಎರಡು ದಿನಾಂಕಗಳನ್ನು ನೀಡುವಂತೆ ಕೇಳಿದ್ದರು. ಆದ್ದರಿಂದ ಅವರ ಕಚೇರಿಗೆ ಜುಲೈ 29 ಮತ್ತು ಆಗಸ್ಟ್ 5ರ ಎರಡು ದಿನಾಂಕಗಳ ಬಗ್ಗೆ ತಿಳಿಸಲಾಯಿತು. ಅಂತಿಮವಾಗಿ ಅವರು ಆಗಸ್ಟ್ 5ಕ್ಕೆ ಬರಲು ಒಪ್ಪಿಗೆ ನೀಡಿದರು ಎಂದು ಗೋವಿಂದ ದೇವಗಿರಿ ಹೇಳಿದರು.
ಈ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗವಹಿಸುವ ಬಗ್ಗೆ ಪ್ರಧಾನಿ ಕಚೇರಿ ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.