ಮಲ್ಪೆ(ಉಡುಪಿ): ಮಲ್ಪೆಯ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತಿದ್ದ ಇಬ್ಬರು ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನಿಸಿದ ಆರೋಪ ಎದುರಿಸುತ್ತಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ಮೂಲದ ರೋಹಿತ್ (29) ಮತ್ತು ಸಂತ್ರಿ (37) ಬಂಧಿತರಾಗಿದ್ದಾರೆ.
ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್ ಕಂಪನಿ ಕೇಂದ್ರ ಸರ್ಕಾರ ಸ್ವಾಮ್ಯದ ಬಂದರು ಹಡಗು ಮತ್ತು ಜಲಸಾರಿಗೆ ಇಲಾಖೆಯ ಅಧೀನದಲ್ಲಿದೆ. ಈ ಸಂಸ್ಥೆಯಿಂದ M/S Shushma Marine Private Limited ಎಂಬ ಸಂಸ್ಥೆಯ ಸಬ್‌ಕಂಟ್ರಾಕ್ಟ್ ಹೊಂದಿದ್ದು, ಈ ಸಂಸ್ಥೆಯಲ್ಲಿ ಉತ್ತರಪ್ರದೇಶ ರಾಜ್ಯದ ರೋಹಿತ್ ಎಂಬಾತ ಇನ್ಸುಲೇಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಈತ ಈ ಹಿಂದೆ ಕೇರಳ ರಾಜ್ಯದ ಕೊಚ್ಚಿಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಕೇರಳದ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳನ್ನು ನಿರ್ಮಾಣ ಮಾಡಲಾಗುತ್ತದೆ.
ರೋಹಿತ್, ಕೇರಳದಲ್ಲಿ ಕೆಲಸ ಮಾಡುವಾಗ ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್ಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿಯನ್ನು ವಾಟ್ಸ್ಆ್ಯಪ್ ಮೂಲಕ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿದ್ದಾನೆ. ನಂತರ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ಗೆ ವರ್ಗಾವಣೆ ಆದ ನಂತರವೂ ಆತನ ಕೊಚ್ಚಿಯಲ್ಲಿರುವ ಆತನ ಸ್ನೇಹಿತನಿಂದ ಮಾಹಿತಿ ಪಡೆದು, ಪುನಃ ವಾಟ್ಸ್ಆ್ಯಪ್ ಮೂಲಕ ಪಾಕಿಸ್ತಾನದ ಅನಧಿಕೃತ ವ್ಯಕ್ತಿಗೆ ಶೇರ್ ಮಾಡಿ, ಭಾರತದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಗೆ ಅಪಾಯವನ್ನುಂಟು ಮಾಡಿದ್ದಾನೆ. ಮತ್ತು ಆಂತರಿಕ ಭಧ್ರತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾನೆ ಎಂದು ದೂರು ನೀಡಲಾಗಿದೆ.
ಈ ಬಗ್ಗೆ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಮಲ್ಪೆಯ ಸಿಇಒ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 128/2025, ಕಲಂ:152 BNS, ಕಲಂ:3,5 OFFICIAL SECRETS ACT, 1923 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳಾದ ರೋಹಿತ್ (29) ಮತ್ತು ಸಂತ್ರಿ (37) ಎಂಬಿಬ್ಬರನ್ನು ಬಂಧಿಸಿದ್ದಾರೆ. ಇಬ್ಬರೂ ಉತ್ತರ ಪ್ರದೇಶ ಮೂಲದವರಾಗಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ಡಿಸೆಂಬರ್ 03ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
Laxmi News 24×7