ಈ ಜಗತ್ತೊಂದು ವಿಸ್ಮಯಗಳ ಸಂತೆ. ಇವತ್ತಿನ ಜನ ವಿಜ್ಞಾನ ಮತ್ತು ಆವಿಷ್ಕಾರಗಳತ್ತ ಕಣ್ಣರಳಿಸಿ ನೋಡ್ತಾರೆ. ಅವಕ್ಕಾಗಿಸುವಂತಹ ಅಪಾದಮಸ್ತಕ ಅಚ್ಚರಿಯಿಂದ ನೋಡುವ ಅನೇಕರಿಗೆ ಈ ಜಗತ್ತಿನಲ್ಲಿರೋ ಚಿತ್ರವಿಚಿತ್ರ ನಂಬಿಕೆಗಳು, ಆಚರಣೆಗಳೇನಾದರೂ ತಿಳಿದರೆ ಕಂಗಾಲೆದ್ದು ಹೋಗ್ತಾರೆ. ವಿಶ್ವದ ನಾನಾ ದೇಶಗಳ, ನಾನಾ ಭಾಗಗಳಲ್ಲಿ ಆಚರಿಸಲ್ತಡುತ್ತಿರೋ ಆಚರಣೆಗಳಿವೆಯಲ್ಲಾ? ಅದುವೇ ಒಂದು ಅಧ್ಯಯನಯೋಗ್ಯ ವಿಚಾರ. ಅಂಥವುಗಳಲ್ಲಿ ಕೆಲ ವಿಚಾರಗಳು ಸಿಲ್ಲಿ ಅನ್ನಿಸಿದರೆ ಮತ್ತೆ ಕೆಲ ವಿಚಾರಗಳನ್ನ ಅರಗಿಸಿಕೊಳ್ಳಲು ಸಾಧ್ಯವಾಗೋದೇ ಇಲ್ಲ.
ಜಗತ್ತಿನಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಆಚಾರ ವಿಚಾರ, ಜೀವನಕ್ರಮ ಬದಲಾಗುತ್ತೆ. ಅದೆಲ್ಲ ಏನೇ ಇದ್ದರೂ ಯಾರೇ ಸತ್ತರೂ ಅಂತ್ಯ ಸಂಸ್ಕಾರ ಮಾಡೋ ಪರಿಪಾಠ ಇದ್ದೇ ಇದೆ. ಹೆಚ್ಚೆಂದರೆ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಬದಲಾಗಬಹುದಷ್ಟೇ. ಆದರೆ ಇಂಡೋನೇಷ್ಯಾದ ಪ್ರದೇಶವೊಂದರಲ್ಲಿ ವಾಸಿಸೋ ಜನ ಪ್ರೀತಿಪಾತ್ರರು ಸತ್ತರೆ ತಿಂಗಳುಗಟ್ಟಲೆ ಹೆಣದೊಂದಿಗೇ ಬದುಕ್ತಾರೆ. ಇದು ನಂಬಲು ಸಾಧ್ಯವಾಗದಿದ್ರೂ ನಂಬಲೇಬೇಕಾದ ಸತ್ಯ.
ಇಂಥಾದ್ದೊಂದು ವಿಚಿತ್ರ ಪದ್ಧತಿ ಜಾರಿಯಲ್ಲಿರೋದು ಇಂಡೋನೇಷ್ಯಾದ ಸುಲವೇಸಿ ಎಂಬ ಜನಾಂಗದಲ್ಲಿ. ಆ ಜನ ಪ್ರೀತಿ ಪಾತ್ರರು ಸತ್ತಾಗ ಅಂತ್ಯ ಸಂಸ್ಕಾರ ಮಾಡೋದಿಲ್ಲ. ಬದಲಾಗಿ ಒಂದಷ್ಟು ತಿಂಗಳುಗಳ ಕಾಲ ಹೆಣದೊಂದಿಗೇ ಬದುಕುತ್ತಾರೆ. ಸಾಮಾನ್ಯವಾಗಿ ಸತ್ತ ದೇಹ ದಿನದೊಪ್ಪತ್ತಿನಲ್ಲಿಯೇ ಕೊಳೆತು ನಾರಲಾರಂಭಿಸುತ್ತೆ. ಈ ಜನಾಂಗದ ಮಂದಿ ಹಾಗಾಗದಿರಲು ಒಂದಷ್ಟು ಮೂಲಿಕೆ ಪದ್ಧತಿಗಳನ್ನು ಅನುಸರಿಸುತ್ತದ್ದಾರಂತೆ.
ಆ ನಂತರ ಅದೆಷ್ಟೋ ತಿಂಗಳ ನಂತರ ತಿಥಿಯಂಥಾ ವಿಧಿ ವಿಧಾನಗಳು ಜರುಗುತ್ತವೆ. ಅದುವರೆಗೂ ಆ ಜನ ಹೆಣವನ್ನು ಹೆಗಲ ಮೇಲಿರಿಸಿಕೊಂಡು ಊರು ತುಂಬಾ ಅಡ್ಡಾಡ್ತಾರೆ. ಹೆಣ ಅಂದ್ರೆ ಯಾರಲ್ಲಿಯಾದ್ರೂ ಭಯ ಇರುತ್ತೆ. ಆದ್ರೆ ಆ ಬುಡಕಟ್ಟು ಜನ ಮಾತ್ರ ಮಲಗೋದನ್ನು ಸೇರಿಸಿ ಪ್ರತಿಯೊಂದನ್ನೂ ಹೆಣದ ಸಮ್ಮುಖದಲ್ಲಿಯೇ ಮಾಡ್ತಾರೆ. ಅದೆಷ್ಟೋ ವರ್ಷಗಳಿಂದ ಅಲ್ಲಿ ಈ ಪದ್ಧತಿ ಚಾಲ್ತಿಯಲ್ಲಿದೆಯಂತೆ.