ಬೆಂಗಳೂರು : ರಾಮನಗರದ ಕೇತಗಾನಹಳ್ಳಿಯ ವಿವಿಧ ಸರ್ವೇ ಸಂಖ್ಯೆಗಳಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಗೋಮಾಳ ಜಮೀನು ತೆರವಿಗೆ ಸಂಬಂಧಿಸಿದಂತೆ ಮುಂದಿನ 10 ದಿನಗಳಲ್ಲಿ ಸಂಪೂರ್ಣ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಕೇತಗಾನಹಳ್ಳಿಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತವರ ಸಂಬಂಧಿಕರಿಂದ ಒತ್ತುವರಿಯಾಗಿರುವ ಜಮೀನು ತೆರವು ಮಾಡುವಂತೆ ಲೋಕಾಯುಕ್ತ ಆದೇಶವನ್ನು ಜಾರಿ ಮಾಡದ ಕ್ರಮವನ್ನು ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಟಿ.ವೆಂಕಟೇಶ್ ನಾಯಕ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ಅಲ್ಲದೆ, ಕೇತಗಾನಹಳ್ಳಿಯಲ್ಲಿ ಸರ್ವೆ ನಂ. 7, 8, 9, 16 ಮತ್ತು 79ರ ಒತ್ತುವರಿ ತೆರವಿನ ಬಗ್ಗೆ 10 ದಿನಗಳಲ್ಲಿ ವರದಿ ನೀಡಬೇಕು. ಈ ಸಂಬಂಧ ಏಪ್ರಿಲ್ 3ರೊಳಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು. ವಿಚಾರಣೆ ವೇಳೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಹಾಜರಿದ್ದು, ವಿವರಣೆ ನೀಡಿದರು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಹೆಚ್ ಡಿ ಕುಮಾರಸ್ವಾಮಿ ಅವರ ಕುಟುಂಬದ ವಿರುದ್ಧ ಭೂ ಒತ್ತುವರಿ ಮಾಡಿದ್ದಾರೆ ಎನ್ನಲಾದ 86 ಎಕರೆ ಜಮೀನಿನ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ. ಜಮೀನು ಮಂಜೂರಾತಿ ಅಸಲಿಯೇ ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ತನಿಖೆ ನಡೆಯುತ್ತಿದೆ. 14 ಎಕರೆ ಜಮೀನು ಒತ್ತುವರಿಯನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಇನ್ನುಳಿದ 18 ಎಕರೆಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲಾಗಿದ್ದು, ಕಾನೂನು ಪ್ರಕಾರ ಒತ್ತುವರಿ ತೆರವು ಮಾಡಿಸಲಾಗುವುದು. ಒಂದು ಇಂಚು ಸರ್ಕಾರಿ ಜಮೀನನ್ನು ಬಿಡುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಸಮಾಜ ಪರಿವರ್ತನಾ ಸಮುದಾಯದ ಪರ ವಕೀಲರು, ಕಂದಾಯ ಇಲಾಖೆಗೆ ಸೇರಿದ 14 ಎಕರೆ ಜಮೀನು ಮಾತ್ರ ಒತ್ತುವರಿಯಾಗಿದೆ ಎಂದು ಹೇಳಿ ಅದನ್ನು ತೆರವು ಮಾಡಲಾಗುತ್ತಿದೆ. ಒಟ್ಟು 110 ಎಕರೆ ಗೋಮಾಳ ಜಮೀನು ಒತ್ತುವರಿಯಾಗಿದೆ. ನಕಲಿ ಭೂ ಮಂಜೂರಾತಿ ಆಧರಿಸಿ ಖರೀದಿ ಮಾಡಿದ್ದಾರೆ. ಯಾವುದಕ್ಕೂ ಗ್ರಾಂಟ್ ನೀಡಿರುವ ಕುರಿತಂತೆ ಯಾವುದೇ ದಾಖಲೆಗಳಿಲ್ಲ. 2014 ರಲ್ಲೇ ತಹಶೀಲ್ದಾರ್ ಈ ಬಗ್ಗೆ ವರದಿ ನೀಡಿದ್ದಾರೆ. ಈವರೆಗೂ ಸಂಪೂರ್ಣ ಒತ್ತುವರಿ ತೆರವುಗೊಳಿಸಿಲ್ಲ. ನಕಲಿ ಗ್ರಾಂಟ್ ಆಧರಿಸಿ ಖರೀದಿಸಿದ ಜಮೀನು ವಶಪಡಿಸಿಕೊಂಡಿಲ್ಲ. ಗೋಮಾಳ ಜಮೀನನ್ನು ಪ್ರಭಾವಿಗಳು ಖರೀದಿ ಮಾಡಿದ್ದಾರೆ. ಹೀಗಾಗಿ ಸಂಪೂರ್ಣ ಜಮೀನು ಒತ್ತುವರಿ ಎಂದು ಪರಿಗಣಿಸಿ ವಶಪಡಿಸಿಕೊಳ್ಳಬೇಕು. ಲೋಕಾಯುಕ್ತ ವರದಿಯಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಪೀಠಕ್ಕೆ ತಿಳಿಸಿದರು
Laxmi News 24×7