ಶಿರಸಿ: ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಕೆಡಿಸಿಸಿ) ಆಡಳಿತ ಮಂಡಳಿ ಚುನಾವಣೆಯಲ್ಲಿ ಪ್ರಕಟಗೊಂಡ ಹಾಗೂ ಮುಂಚೂಣಿಯ ಫಲಿತಾಂಶಗಳ ಪ್ರಕಾರ ಹಾಲಿ ಅಧ್ಯಕ್ಷ ಹಾಗೂ ಶಾಸಕ ಶಿವರಾಮ್ ಹೆಬ್ಬಾರ್ ನೇತೃತ್ವದ ಬಣ ಮುನ್ನಡೆ ಸಾಧಿಸಿದೆ. ಸದ್ಯ 16 ಕ್ಷೇತ್ರಗಳಲ್ಲಿ ಕೇವಲ 7 ಕ್ಷೇತ್ರಗಳ ಫಲಿತಾಂಶ ಅಧಿಕೃತವಾಗಿ ಪ್ರಕಟಗೊಂಡಿದೆ.
ಮುಂದಿನ ಐದು ವರ್ಷಗಳ ಆಡಳಿತ ಮಂಡಳಿ ಚುನಾವಣೆಗೆ ಶನಿವಾರ 13 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಿತು. ಕಳೆದ ಎರಡು ತಿಂಗಳಿನಿಂದ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶಾಸಕ ಹಾಗೂ ಹಾಲಿ ಅಧ್ಯಕ್ಷ ಶಿವರಾಮ್ ಹೆಬ್ಬಾರ್ ಮತ್ತು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬಣಗಳ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ಚುನಾವಣೆಗೂ ಮೊದಲು ಸಚಿವರ ಬಣದಿಂದ 2 ಹಾಗೂ ಹೆಬ್ಬಾರ್ ಬಣದಿಂದ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 13 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಮುಂಡಗೋಡ, ಹಳಿಯಾಳ, ಜೋಯಿಡಾ, ಕುಮಟಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾದಲ್ಲಿ, ಸಿದ್ದಾಪುರದ ಫಲಿತಾಂಶವನ್ನು ಮತ ಎಣಿಕೆ ಮಾಡದೇ ನ್ಯಾಯಾಲಯ ಸೂಚನೆಯಂತೆ ಮುಂದೂಡಲಾಗಿದೆ. 8 ಕ್ಷೇತ್ರಗಳ ಮತದಾನ ಎಣಿಕೆ ನಡೆದಿದ್ದು, ಫಲಿತಾಂಶ ನ್ಯಾಯಾಲಯದ ಆದೇಶದ ಬಳಿಕ ಪ್ರಕಟವಾಗಬೇಕಿದೆ.
ಪ್ರಕಟಗೊಂಡ ಫಲಿತಾಂಶಗಳ ಪ್ರಕಾರ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ್ ಬಣದಿಂದ ಕುಮಟಾದಲ್ಲಿ ಬಣದ ರಾಜಗೋಪಾಲ ಅಡಿ 9 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಇವರ ವಿರುದ್ಧ ಗಜಾನನ ಪೈ ಹಾಗೂ ಶ್ರೀಧರ ಭಾಗ್ವತ್ 6 ಮತಗಳನ್ನು ಪಡೆದರು. ಅದೇ ರೀತಿ ಹಳಿಯಾಳದಲ್ಲಿ ಎಸ್.ಎಲ್.ಘೋಟ್ನೇಕರ್ 9 ಮತಗಳನ್ನು ಪಡೆದು ವಿಜೇತರಾದರೆ, ಪ್ರತಿಸ್ಪರ್ಧಿ ಸುಭಾಸ್ ಕೊರ್ವೇಕರ್ 4 ಮತಗಳನ್ನು ಪಡೆದರು. ಜೋಯಿಡಾದಿಂದ ಕೃಷ್ಣ ದೇಸಾಯಿ 5 ಮತಗಳನ್ನು ಪಡೆದು ಗೆದ್ದರೆ, ಪುರುಷೋತ್ತಮ ಕಾಮತ್ 4 ಮತಗಳನ್ನು ಪಡೆದು ಸೋಲು ಕಂಡರು. ಮುಂಡಗೋಡದಿಂದ ಎಸ್.ಎಮ್.ನಾಯ್ಕ 8 ಮತಗಳನ್ನು ಪಡೆದರೆ, ಎಲ್.ಟಿ.ಪಾಟೀಲ್ 5 ಮತಗಳನ್ನು ಪಡೆದು ಪರಾಭವಗೊಂಡರು.
ಚುನಾವಣಾ ಪ್ರಕ್ರಿಯೆಯಲ್ಲಿ ಹೆಬ್ಬಾರ್ ಬಣದಿಂದ ಕಾರವಾರದಿಂದ ಪ್ರಕಾಶ ಗುನಗಿ, ಯಲ್ಲಾಪುರದಿಂದ ಶಿವರಾಮ ಹೆಬ್ಬಾರ್, ಮಾರ್ಕೆಟಿಂಗ್ನಿಂದ ಶಿರಸಿ ಟಿಎಮ್ಎಸ್ ರವಿ ಹೆಗಡೆ ಹುಳಗೋಳ ಹಾಗೂ ಮಂಕಾಳ ಬಣದಿಂದ ಔದ್ಯೋಗಿಕದಿಂದ ವಿಶ್ವನಾಥ ಭಟ್ ಕರ್ವ ಮುಂಚೂಣಿಯಲ್ಲಿದ್ದು, ನ್ಯಾಯಾಲಯದ ಆದೇಶದ ಬಳಿಕವೂ ಸಹ ಇವರೆಲ್ಲರ ಗೆಲುವು ಖಚಿತವಾಗಿದೆ. ಹೆಬ್ಬಾರ್ ಬಣದಿಂದ ಮೂವರು ಮುಂಚೂಣಿಯಲ್ಲಿದ್ದರೆ, ವೈದ್ಯ ಬಣದಿಂದ ಒಬ್ಬರು ಮುಂದಿದ್ದಾರೆ.
ನ್ಯಾಯಾಲಯದಲ್ಲಿ!: ಈ ಬಾರಿಯ ಚುನಾವಣೆಯು ಬಹುತೇಕ ನ್ಯಾಯಾಲಯದ ಕಟಕಟೆಯಲ್ಲಿ ನಡೆಯುತ್ತಿದೆ ಎನ್ನುವಂತಾಗಿದೆ. ಅರ್ಬನ್, ಸೌಹಾರ್ದ ಕ್ಷೇತ್ರದಲ್ಲಿ ಮೋಹನ್ ನಾಯಕ್ ದೇವರಬಾವಿ 92, ಮೋಹನ ದಾಸ ನಾಯಕ್ 90, ವಸಂತ ನಾಯಕ್ 21, ಸರಸ್ವತಿ ಎನ್.ರವಿ 4 ಮತಗಳನ್ನು ಪಡೆದಿದ್ದು, ನ್ಯಾಯಾಲಯದಲ್ಲಿ 48 ಮತಗಳ ಎಣಿಕೆ ಆಗಬೇಕಿದೆ. ಅದೇ ರೀತಿ ಹಾಲು ಉತ್ಪಾದಕರ ಕ್ಷೇತ್ರದಲ್ಲಿ ಸುರೇಶ್ಚಂದ್ರ ಹೆಗಡೆ 103, ಶಂಕರ ಹೆಗಡೆ 98 ಮತಗಳನ್ನು ಪಡೆದಿದ್ದು, 17 ಮತಗಳು ನ್ಯಾಯಾಲಯದ ಆದೇಶದ ಬಳಿಕ ಎಣಿಕೆ ಆಗಬೇಕಿದೆ. ಗ್ರಾಹಕರ ಸಂಸ್ಕರಣ ಕ್ಷೇತ್ರದಿಂದ ತಿಮ್ಮಯ್ಯ ಹೆಗಡೆ 10, ನಿರಂಜನ ಹೆಗಡೆ 9 ಮತ ಪಡೆದಿದ್ದು, 15 ಮತಗಳ ಎಣಿಕೆ ಮಾಡಬೇಕಿದೆ.
ಮುಂಚೂಣಿ: ನ್ಯಾಯಾಲಯದಲ್ಲಿ ಪ್ರಕರಣವಿದ್ದರೂ ಕೆಲವರು ಈಗಾಗಲೇ ವಿಜಯ ಸಾಧಿಸಿದ್ದಾರೆ. ಅವರಲ್ಲಿ ಕಾರವಾರದಲ್ಲಿ ನಂದಕೀಶೋರ್ 3, ಪ್ರಕಾಶ ಗುನಗಿ 6, ಶಾಸಕ ಸತೀಶ್ ಸೈಲ್ 0 ಮತಗಳನ್ನು ಪಡೆದಿದ್ದು, 4 ಮತಗಳು ಎಣಿಕೆ ಆಗಬೇಕಿದೆ. ನ್ಯಾಯಾಲಯದ ಮತದಲ್ಲಿ ಒಂದು ಗುನಗಿ, ಮೂರು ನಂದಕಿಶೋರ್ಗೆ ಸೇರಿದ್ದಾಗಿದೆ. ಹೀಗಾಗಿ ಗುನಗಿ ಗೆಲುವು ಖಚಿತವಾಗಿದೆ. ಅದೇ ರೀತಿ ಮಾರ್ಕೆಟಿಂಗ್ನಲ್ಲಿ ರವಿ ಹೆಗಡೆ ಹುಳಗೋಳ 6, ಗೋಪಾಲಕೃಷ್ಣ ವೈದ್ಯ 2 ಮತ ಪಡೆದಿದ್ದಾರೆ. 3 ಮತಗಳ ಎಣಿಕೆ ಆಗಬೇಕಿದೆ. ಮತ ಎಣಿಕೆ ಆದರೂ ರವಿ ಗೆಲುವು ಖಚಿತವಾಗಿದೆ. ಯಲ್ಲಾಪುರದಲ್ಲಿ ಹೆಬ್ಬಾರ್ 10 ಮತ ಪಡೆದಿದ್ದು, ಜಿ.ಎನ್.ಗಾಂವಕರ 2 ಮತ ಪಡೆದಿದ್ದಾರೆ. ಒಂದು ಮತ ಕೋರ್ಟ್ನಲ್ಲಿದ್ದು, ಅದು ಬಂದರೂ ಸಹ ಯಾವುದೇ ವ್ಯತ್ಯಾಸ ಆಗುವುದಿಲ್ಲ.
ಇನ್ನು ಶಿರಸಿ ಪ್ಯಾಕ್ಸ್ನಲ್ಲಿ ಎಮ್.ಎ.ಹೆಗಡೆ 13 ಮತಗಳನ್ನು ಪಡೆದಿದ್ದು, ಜಿ.ಆರ್.ಹೆಗಡೆ ಬೆಳ್ಳೆಕೇರಿ 12 ಮತ ಪಡೆದಿದ್ದಾರೆ. ಇಲ್ಲಿ ಒಂದು ಮತ ನ್ಯಾಯಾಲಯದಲ್ಲಿದೆ. ಅದು ಅಭ್ಯರ್ಥಿ ಜಿ.ಆರ್.ಹೆಗಡೆ ಅವರದ್ದಾಗಿರುವ ಕಾರಣ, ಸಮ ಆಗಿದೆ. ಆದರೆ ಜಿ.ಆರ್.ಹೆಗಡೆ ಅವರು ಮೂರು ಡೆಲಿಗೇಟ್ ಹೊಂದಿದ್ದಾರೆ ಎಂದು ನ್ಯಾಯಾಲಯದಲ್ಲಿ ಪ್ರಕರಣವಿದೆ. ಹೀಗಾಗಿ ಜಿ.ಆರ್. ಪರ ಫಲಿತಾಂಶ ಬಂದಲ್ಲಿ ಚೀಟಿ ಆಯ್ಕೆ ನಡೆಯಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಇಲ್ಲದೇ ಹೋದಲ್ಲಿ ಎಮ್.ಎ.ಹೆಗಡೆ ಗೆಲ್ಲಲಿದ್ದಾರೆ ಎನ್ನಲಾಗಿದೆ.
Laxmi News 24×7