ಬೆಂಗಳೂರು: 5 ವರ್ಷದ ಬಾಲಕಿಯನ್ನು ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಸಮ್ಮ ಹಾಗೂ ಸುಲೋಚನಾ ಎಂಬಿಬ್ಬರನ್ನು 24 ಗಂಟೆಗಳೊಳಗೆ ಬಂಧಿಸಿದ ಪೊಲೀಸರು, ಬಾಲಕಿಯನ್ನು ರಕ್ಷಿಸಿ ಆಕೆಯ ಪೋಷಕರಿಗೊಪ್ಪಿಸಿದ್ದಾರೆ.
ಜೂನ್ 21ರಂದು ವಿಶ್ವೇರಯ್ಯ ಲೇಔಟ್‌ನಲ್ಲಿ ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಅಪಹರಿಸಿ, ಸಿಂಧನೂರಿಗೆ ಕರೆದೊಯ್ದಿದ್ದರು.
ಸಿಂಧನೂರು ಮೂಲದವರೇ ಆದ ಬಾಲಕಿಯ ಪೋಷಕರು ಹಾಗೂ ಆರೋಪಿಗಳು ಪರಸ್ಪರ ಪರಿಚಿತರಾಗಿದ್ದು, 2 ವರ್ಷಗಳಿಂದಲೂ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಜೂನ್ 21ರಂದು ಪೋಷಕರ ಗಮನಕ್ಕೆ ಬಾರದಂತೆ ಬಾಲಕಿಯನ್ನು ಸಿಂಧನೂರಿಗೆ ಕರೆದೊಯ್ದಿದ್ದರು. ಇತ್ತ ಮಗಳು ಕಾಣೆಯಾಗಿದ್ದಾಳೆಂದು ಪೋಷಕರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಬಾಲಕಿ ಪೋಷಕರಿಗೆ ಪರಿಚಿತ ಮಹಿಳೆಯೇ ಮಗುವನ್ನು ಕರೆದುಕೊಂಡು ಸಿಂಧನೂರಿಗೆ ತೆರಳಿರುವುದು ತಿಳಿದು ಬಂದಿತ್ತು. ಕೂಡಲೇ ರಾಯಚೂರು ಪೊಲೀಸರಿಗೆ ಮಾಹಿತಿ ನೀಡಿದ ಜ್ಞಾನಭಾರತಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Laxmi News 24×7