ಶಿವಮೊಗ್ಗ: “ಸದನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರು ಕಾನೂನಾತ್ಮಕವಾಗಿ ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ ಅವರು ತಮ್ಮ ತೀರ್ಮಾನದಿಂದ ಹಿಂದೆ ಸರಿಯಬಾರದು” ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದಲ್ಲಿ ಬಾರೆಹಳ್ಳ ಮತ್ತು ಹಾಯ್ಹೊಳೆ ಕರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಪುರದಾಳು ಗ್ರಾಮದ ಬಾರೆಹಳ್ಳ ಡ್ಯಾಂ ನಿರ್ಮಾಣವಾಗಿ 45 ವರ್ಷವಾಗಿದೆ. ಹಿಂದೆ ನೋಡಿದಾಗ ನೀರು ಸಾಕಷ್ಟು ಪೋಲಾಗಿ ಹೋಗುತ್ತಿತ್ತು. ಇದರ ರಿಪೇರಿ ಕಾರ್ಯಕ್ಕೆ ಈಗ ಮುಂದಾಗಿದ್ದೇವೆ. ಈ ಕಾಮಗಾರಿಗೆ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಬಾರೆಹಳ್ಳ ಹಾಗೂ ಹಾಯ್ಹೊಳೆ ಡ್ಯಾಂ ಅಭಿವೃದ್ಧಿಗೆ 6 ಕೋಟಿ ರೂ. ಮಂಜೂರಾಗಿದೆ. ಇದನ್ನು ನೀರಾವರಿ ಇಲಾಖೆಯ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ” ಎಂದು ಹೇಳಿದರು.
“ಶರಾವತಿ ಸಂತ್ರಸ್ತರಿಗೆ ನ್ಯಾಯ ಸಿಗಲಿದೆ. ಶರಾವತಿ ಸಂತ್ರಸ್ತರ ಕುರಿತು ರಾಜ್ಯ ಮುಖ್ಯಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಡಿಸಿ ಅವರು, ಅರಣ್ಯ, ಕಂದಾಯ ಇಲಾಖೆಯವರ ಜೊತೆ ಸಭೆ ನಡೆಸಿದ್ದಾರೆ. ಸರ್ವೇ ನಡೆಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಸಭೆ ನಡೆಸಲಾಗುತ್ತಿದೆ. ಸರ್ವೇ ನಡೆಸಿ, ಯಾರು ಯಾರು ಎಲ್ಲಿದ್ದಾರೆ ಎಂದು ನೋಡಿ ಅವರಿಗೆ ಹಕ್ಕುಪತ್ರವನ್ನು ನೀಡಲಾಗುತ್ತದೆ. ಈಗ ಒಂದು ಹಂತಕ್ಕೆ ಬಂದಿದೆ. ನಮ್ಮ ರಾಜ್ಯ ಸರ್ಕಾರದ ಕೆಲಸ ಮುಗಿಸಿದ್ದೇವೆ. ಕೇಂದ್ರ ಸರ್ಕಾರ ಸಹ ಉತ್ತಮವಾಗಿ ಸ್ಪಂದಿಸುತ್ತಿದೆ”ಎಂದು ವಿವರಿಸಿದರು.