ಯಾದಗಿರಿ: ಜಿಲ್ಲೆಯಲ್ಲಿ ಒಂದು ಗಂಟೆಗೂ ಅಧಿಕ ಹೊತ್ತು ಮಳೆ ಬಂದಿದ್ದು, ಹಳ್ಳಿ ಮತ್ತು ನಗರಗಳಲ್ಲಿ ಮಳೆ ಅವಾಂತರ ಸೃಷ್ಟಿ ಮಾಡಿದೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ಚರಂಡಿಗಳು ತುಂಬಿ ಹರಿದಿವೆ.
ಪರಿಣಾಮ ರಸ್ತೆ ತುಂಬೆಲ್ಲಾ ಕೊಳಚೆನೀರು ನಿಂತು, ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಯಾದಗಿರಿ ನಗರದ ಗಾಂಧಿ ವೃತ್ತ, ನಗರ ಪೋಲಿಸ್ ಠಾಣೆಯ ಮುಂದೆ ನೀರು ನಿಂತು ಕೆರೆಯಂತಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆಗಾಲ ಆರಂಭವಾಗಿದ್ದರೂ ನಗರಸಭೆ ಮಾತ್ರ ಇನ್ನೂ ನಿದ್ದೆಯಿಂದ ಎದ್ದಿಲ್ಲ ಅಂತ, ಸ್ಥಳೀಯರು ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ತಾಲೂಕಿನ ಬಂದಳ್ಳಿಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಮುಖ್ಯ ರಸ್ತೆಯ ಚರಂಡಿ ಮೇಲೆ ಸಾರ್ವಜನಿಕ ಶೌಚಾಲಯ ಕಟ್ಟಿದ ಪರಿಣಾಮ, ಶೌಚಾಲಯ ಕೊಳಚೆನೀರು ರಸ್ತೆಗೆ ಹರಿಯುತ್ತಿವೆ. ತಗ್ಗು ಪ್ರದೇಶಗಳಲ್ಲಿನ ಮನೆಗಳ ಮುಂದೆ ಈ ನೀರು ಸಂಗ್ರಹವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದ್ದರೂ ಗ್ರಾಮ ಪಂಚಾಯತಿ ಅಧಿಕಾರಗಳ ಮಾತ್ರ ಕ್ಯಾರೆ ಎನ್ನುತ್ತಿಲ್ಲ.