Breaking News

ಎಸ್‌ಐಟಿಗೆ 18 ಸಿಬ್ಬಂದಿ ನೇಮಕ; ಅಶ್ಲೀಲ ವಿಡಿಯೋದಲ್ಲಿ ಇರುವವರು ಯಾರು?

Spread the love

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಿಸಿ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ 18 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿಯಲ್ಲಿ ಹೆಚ್ಚಿನ ಮಹಿಳಾ ಸಿಬ್ಬಂದಿಯಿದ್ದು, ವಿಡಿಯೋದಲ್ಲಿರುವ ಮಹಿಳೆಯರ ತನಿಖೆಗೆ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.

ವಿಶೇಷ ತನಿಖಾ ತಂಡದಿಂದ ತನಿಖೆ ಚುರುಕಾಗುತ್ತಿದ್ದು, ವಿಡಿಯೋ ಪರಿಶೀಲನೆಗೆ ಪ್ರತ್ಯೇಕ ಟೀಂ ಮಾಡಲಾಗಿದೆ. ಇನ್‌ಸ್ಪೆಪಕ್ಟರ್ ಸೇರಿ ನಾಲ್ವರ ಪ್ರತ್ಯೇಕ ತಂಡದಿಂದ ವಿಡಿಯೋ ಪರಿಶೀಲನೆ ಮಾಡಲಾಗುತ್ತಿದೆ. ಪೆನ್ ಡ್ರೈವ್‌ನಲ್ಲಿರುವ ಅಷ್ಟೂ ವಿಡಿಯೋ ಪರಿಶೀಲನೆ ಮಾಡಿ ಎಸ್‌ಐಟಿ ಮುಖ್ಯಸ್ಥರಿಗೆ ತಂಡ ವರದಿ ಕೊಡಲಿದೆ. ವಿಶೇಷ ಎಂದರೆ, ಪ್ರಾಥಮಿಕ ವರದಿಗಳ ಪ್ರಕಾರ, ವಿಡಿಯೋಗಳಲ್ಲಿರುವ ಮಹಿಳೆಯರಲ್ಲಿ ಬಹುತೇಕರು ಸರ್ಕಾರಿ ಅಧಿಕಾರಿಗಳು ಎಂಬ ಚಕಿತಗೊಳಿಸುವ ಅಂಶ ಬಯಲಾಗಿದೆ.

PSI, AE ಹೀಗೆ ವಿಡಿಯೋದಲ್ಲಿರುವ ಸುಮಾರು ಅರ್ಧದಷ್ಟು ಮಹಿಳೆಯರು ಸರ್ಕಾರಿ ಮಹಿಳಾ ಅಧಿಕಾರಿಗಳು ಎಂಬ ವಿಚಾರ ಬೆಳಕಿಗೆ ಬಂದಿದೆ. ಇದರೊಂದಿಗೆ ಕೆಲಸ ಕೊಡಿಸುವ, ವರ್ಗಾವಣೆ ವಿಚಾರದಲ್ಲೂ ಈ ದಂಧೆ ಭಾಗಿಯಾಗಿರಬಹುದು ಎಂಬ ವ್ಯಾಪಕ ಅನುಮಾನ ವ್ಯಕ್ತವಾಗಿದೆ.

18 ಸಿಬ್ಬಂದಿ ನೇಮಕ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತಂಡಕ್ಕೆ ಸಿಐಡಿಯಿಂದ 18 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯದ ‌ವಿವಿಧ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪರಿಣಿತರ ತಂಡ‌ವನ್ನು ರಚಿಸಲಾಗಿದ್ದು, ಇಂದಿನಿಂದಲೇ ಕಾರ್ಯಾಚರಣೆ ಆರಂಭ ಸಾಧ್ಯತೆ ಇದೆ.

ಎಸಿಪಿಗಳಾದ ಪ್ರಿಯದರ್ಶಿನಿ ಈಶ್ವರ್‌ ಸಾನಿಕೊಪ್ಪ, ಸತ್ಯನಾರಾಯಣ ಸಿಂಗ್‌, ಧನ್ಯ ಎನ್‌. ನಾಯ್ಕ್‌, ಪಿಐಗಳಾದ ಸುಮರಾಣಿ ಬಿ.ಎಸ್.‌, ಸ್ವರ್ಣ ಬಿ.ಎಸ್.‌, ಭಾರತಿ, ಹೇಮಂತ್‌ ಕುಮಾರ್‌, ರಾಜಾ ಜಿ.ಸಿ., ಪಿಎಸ್‌ಐಗಳಾದ ವೈಲೆಟ್‌ ಫ್ಲೆಮೀನಾ, ವಿನುತ, ನಂದೀಶ್‌, ಕುಮುದ, ಎಚ್‌ಸಿಗಳಾದ ಸುಮತಿ, ಮನೋಹರ, ಸುನೀಲ್‌ ಬೆಳವಲಗಿ, ಬಸವರಾಜ್‌ ಮೈಗೇರಿ, ಪಿಸಿಗಳಾದ ರಂಗಸ್ವಾಮಿ, ಸಿಂಧುರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಈ ನಡುವೆ ಡಿಜಿ ಅಲೋಕ್ ಮೋಹನ್ ಅವರು, “ಪ್ರಕರಣ ತನಿಖೆಗೆ ಎಸ್‌ಐಟಿ ರಚನೆಯಾಗಿದೆ. ತನಿಖೆ ನಡೆದಿದೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದ್ದು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದೆ. ವೈರಲ್ ವಿಡಿಯೊಗಳ ಸತ್ಯಾಸತ್ಯತೆ ಪರಿಶೀಲನೆಗೆ ಮುಂದಾಗಲಾಗಿದೆ. ಇನ್ನು ಜರ್ಮನಿಗೆ ತೆರಳಿರುವ ಪ್ರಜ್ವಲ್‌ ರೇವಣ್ಣ ಅಲ್ಲಿ ಎಲ್ಲಿದ್ದಾರೆ ಎಂಬ ಬಗ್ಗೆ ಎಂಬ ಬಗ್ಗೆ ಎಸ್‌ಐಟಿ ಮಾಹಿತಿಯನ್ನು ಕಲೆಹಾಕುತ್ತಿದೆ. ಹೀಗಾಗಿ ಅವಶ್ಯ ಬಿದ್ದರೆ ಪ್ರಜ್ವಲ್‌ ಇರುವಲ್ಲಿಗೆ ಹೋಗಿ ಕರೆತರಲು ಪ್ಲ್ಯಾನ್‌ ಮಾಡಲಾಗುತ್ತಿದೆ ಎನ್ನಲಾಗಿದೆ.

ಕೆಲವು ತಂಡಗಳ ರಚನೆ

ತನಿಖೆ ನಡೆಸಲು ಕೆಲವು ತಂಡಗಳನ್ನು ರಚನೆ ಮಾಡಲು ಈಗಾಗಲೇ ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಹೊಳೆನರಸೀಪುರ ನಗರ ಠಾಣೆಯಲ್ಲಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೊಳೆನರಸೀಪುರ ನಗರ ಠಾಣೆಗೆ ದೂರು ನೀಡಿದ ಎಸ್‌ಐಟಿ ತಂಡವು ಮೊದಲಿಗೆ ಸಂತ್ರಸ್ತೆಯ ಹೇಳಿಕೆಯನ್ನು ಪಡೆದುಕೊಳ್ಳಲಿದ್ದಾರೆ. ಇನ್ನು ಪ್ರಕರಣದ ಬಗ್ಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾದರೂ ಎಸ್‌ಐಟಿಗೆ ವರ್ಗಾವಣೆ ಆಗಲಿದೆ, ಹಾಗೆಯೇ ತನಿಖೆ ಭಾಗವಾಗಿ ವೈರಲ್ ವಿಡಿಯೊಗಳ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಲು ಎಸ್‌ಐಟಿ ಮುಂದಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಿದೆ.


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ