ರಾಯಚೂರು, : ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಕಾಟ ಕೊಟ್ಟ ಘಟನೆರಾಯಚೂರು(Raichur) ಜಿಲ್ಲೆಯಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದ ವ್ಯಕ್ತಿ ನೇರವಾಗಿ ಮಾನ್ವಿ ಪೊಲೀಸ್ ಠಾಣೆಗೆ ಬಂದು ನೀಡಿದ ಕಾಟಕ್ಕೆ ಪೊಲೀಸರೇ ಸುಸ್ತಾಗಿದ್ದರು. ಊಟದ ಹೊತ್ತಲ್ಲಿ ಎಂಟ್ರಿ ಕೊಟ್ಟಿದ್ದ ಆತನ ಕಿರಿಕ್ಗೆ ಖಾಕಿ ಪಡೆ ಏನ್ ಮಾಡಬೇಕು ಎಂದು ತಿಳಿಯದೇ ತಲೆ ಮೇಲೆ ಕೈ ಹೊತ್ತು ಕೂತಿದ್ದರು. ಮದಿರೆಯ ಮತ್ತಲ್ಲಿ ಹಾವಳಿ ಇಟ್ಟಿದ್ದವನ ಡಿಮ್ಯಾಂಡ್ಗೆ ಪೊಲೀಸರಿಗೆ ದಿಕ್ಕೆ ತೋಚದಂತಾಗಿತ್ತು.
ಏಕಾಏಕಿ ಠಾಣೆಗೆ ಎಂಟ್ರಿ ಕೊಟ್ಟಿದ್ದ ನರಸಿಂಹ, ನನಗೆ ಹೆಂಡ್ತಿ ಬೇಕು, ಇಲ್ಲದಿದ್ದರೆ ಠಾಣೆ ಬಿಟ್ಟು ಹೋಗಲ್ಲ ಅಂತ ಪಟ್ಟು ಹಿಡಿದಿದ್ದಾನೆ. ಅರೆಬರೆ ಬಟ್ಟೆ ಹಾಕಿಕೊಂಡು ತೇಲಾಡುತ್ತಿದ್ದಿದ್ದನ್ನ ನೋಡಿ ಈತ ಪಕ್ಕಾ ಕುಡುಕ ಅನ್ನೋದು ಪೊಲೀಸರಿಗೆ ಗೊತ್ತಾಗಿದೆ. ಹೀಗಾಗಿ ಆತನಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರೂ ಕೇಳಲಿಲ್ಲ.
ಬಿಸಿಲು ನೆತ್ತಿ ಸುಡುತ್ತಿದ್ದರಿಂದ ಆತನಿಗೆ ಮದ್ಯದಮಲು ನೆತ್ತಿಗೇರಿತ್ತು. ಪೊಲೀಸರ ಮಾತು ಕೇಳದೇ ಇಂಗ್ಲಿಷ್ನಲ್ಲಿ ಲೈಫ್ ಲಾಂಗ್ ಅಂತೆಲ್ಲಾ ಇಂಗ್ಲಿಷ್ನಲ್ಲಿ ಡೈಲಾಗ್ ಹೊಡೆದಿದ್ದಾನೆ. ಬಳಿಕ ನಾನು ಸಾಯೋ ವರೆಗೂ ಜಾಗ ಬಿಟ್ಟು ಕದಲಲ್ಲ ಅಂತ ಪಟ್ಟು ಹಿಡಿದಿದ್ದಾನೆ. ಅಲ್ಲಿದ್ದ ಕೆಲ ಸಾರ್ವಜನಿಕರು ಕೂಡ ಆತನನ್ನ ಮಾತನಾಡಿಸುವ ಪ್ರಯತ್ನ ಮಾಡಿರೂ ಸಾಧ್ಯವಾಗಲಿಲ್ಲ. ಬಳಿಕ ಆತನ ಊರು ಯಾವುದು ಅಂತ ವಿಚಾರಿಸಿದಾಗ ಎಲ್ಲ ಮಾಹಿತಿ ಬೆಳಕಿಗೆ ಬಂದಿದೆ.