ಮುಂಬೈ: ಮಹಾರಾಷ್ಟ್ರ ರಾಜಕೀಯ ಹೇಗೆ ಬೇಕಾದರೂ ತಿರುವು ಪಡೆಯುತ್ತದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಹೋದರ ಉದ್ದವ್ ಠಾಕ್ರೆ ಜೊತೆ ಮೈತ್ರಿ ಮಾಡಿಕೊಂಡಿದ್ದ ರಾಜ್ ಠಾಕ್ರೆಯ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಈಗ ಶಿಂಧೆ ಬಣದ ಶಿವಸೇನೆಗೆ ಬೆಂಬಲ ಸೂಚಿಸಿದೆ.
ಕಲ್ಯಾಣ್-ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಚುನಾವಣೆಗೆ ಎಂಎನ್‌ಎಸ್ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಬೆಂಬಲ ನೀಡಿದೆ.
ರಾಜ್ ಠಾಕ್ರೆ ಸ್ಥಳೀಯ ನಾಯಕರಿಗೆ ಈ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲು ಅಧಿಕಾರ ನೀಡಿದ್ದರು. ನಮ್ಮ ಪ್ರದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಶಿಂಧೆ ನೇತೃತ್ವದ ಶಿವಸೇನೆಗೆ ಬೆಂಬಲ ನೀಡುವ ನಿರ್ಧಾರವನ್ನು ಸ್ಥಳೀಯ ನಾಯಕತ್ವ ತೆಗೆದುಕೊಂಡಿದೆ ಎಂದು ಪಕ್ಷ ಹೇಳಿದೆ.
122 ಸದಸ್ಯ ಬಲದ ನಗರ ಪಾಲಿಕೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 53 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 50 ಸ್ಥಾನಗಳನ್ನು ಗೆದ್ದಿದೆ. ಶಿವಸೇನೆ (ಯುಬಿಟಿ) 11, ಎಂಎನ್ಎಸ್ 5, ಕಾಂಗ್ರೆಸ್ 2, ಎನ್‌ಸಿಪಿ (ಎಸ್‌ಪಿ) 1 ವಾರ್ಡ್ ಗೆದ್ದುಕೊಂಡಿದೆ.
ಕಲ್ಯಾಣ್-ಡೊಂಬಿವಿಲಿ ಮತ್ತು ಇತರ 28 ಪುರಸಭೆಗಳಲ್ಲಿ ಮೇಯರ್‌ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಮೇಯರ್ ಹುದ್ದೆಯ ಮೀಸಲಾತಿಗಾಗಿ ಜ.22 ರಂದು ಲಾಟರಿ ಎತ್ತಲಾಗುತ್ತದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.
Laxmi News 24×7
