ವಾಷಿಂಗ್ಟನ್/ಚೀನಾ, ಏ.20-ಕಿಲ್ಲರ್ ಕೊರೊನಾ ವ್ಯಾಪನೆ ಮೂಲಕ ಜಗತ್ತಿನಾದ್ಯಂತ ಭಾರೀ ಸಾವು-ನೋವು ಮತ್ತು ಸೋಂಕು ಹೆಚ್ಚಳಕ್ಕೆ ಕಾರಣವೆನ್ನಲಾದ ಚೀನಾಗೆ ವಿಶೇಷ ತಜ್ಞರ ತಂಡವೊಂದನ್ನು ರವಾನಿಸಿ ತನಿಖೆ ನಡೆಸಲು ಅಮೆರಿಕ ಗಂಭೀರ ಚಿಂತನೆ ನಡೆಸಿದೆ.
ಅಮೆರಿಕದಲ್ಲಿ 41,000 ಮಂದಿ ಸೇರಿದಂತೆ ವಿಶ್ವಾದ್ಯಂತ 1.65 ಲಕ್ಷ ಜನರ ಸಾವಿಗೆ ಚೀನಾ ಹೊಣೆ ಎಂಬುದು ಸಾಬೀತಾದಲ್ಲಿ ಆ ದೇಶ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ನಿನ್ನೆಯಷ್ಟೇ ಖಡಕ್ ಎಚ್ಚರಿಕೆ ನೀಡಿದ್ದರು.
ರಾಜಧಾನಿ ವಾಷಿಂಗ್ಟನ್‍ನ ಶ್ವೇತಭವನದಲ್ಲಿ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಕೋವಿಡ್-19 ಸೋಂಕಿನ ವಿರುದ್ಧ ಹೆಚ್ಚಿನ ತನಿಖೆ ನಡೆಸಲು ಚೀನಾದೊಳಗೆ ತಜ್ಞರ ವಿಶೇಷ ತಂಡವನ್ನು ಕಳುಹಿಸಲು ಬಯಸಿರುವುದಾಗಿ ತಿಳಿಸಿದರು.
ಕೊರೊನಾ ಪಿಡುಗನ್ನು ಒಂದು ಪ್ಲೇಗ್ ಎಂದು ಬಣ್ಣಿಸಿದ ಅವರು, ಚೀನಾ ಈ ವೈರಾಣು ಸಂಬಂಧ ನೀಡುತ್ತಿರುವ ಹೇಳಿಕೆಗಳು ಮತ್ತು ಕೈಗೊಂಡಿರುವ ಕ್ರಮಗಳು ನಮಗೆ ತೃಪ್ತಿ ತಂದಿಲ್ಲ ಎಂದು ಅವರು ಬೀಜಿಂಗ್ ಕಳ್ಳಾಟದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೊರೊನಾ ವೈರಾಣು ದಾಳಿ ಚೀನಾದಲ್ಲಿ ಕಾಣಿಸಿಕೊಂಡಾಗಲೇ ನಾವು ಆ ದೇಶವನ್ನು ಸಂಪರ್ಕಿಸಿ ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ಯತ್ನಿಸಿದೆವು. ಅವರಿಂದ ಸರಿಯಾದ ಉತ್ತರ ಲಭಿಸಿಲ್ಲ. ಈಗಲೂ ಚೀನಾದಿಂದ ಸರಿಯಾದ ಮಾಹಿತಿ ದೊರೆಯುತ್ತಿಲ್ಲ ಎಂದು ಟ್ರಂಪ್ ವಿಷಾದಿಸಿದರು.