ತಿರುವನಂತಪುರ: ದೇಗುಲದಲ್ಲಿ ಬ್ರಾಹ್ಮಣರಿಗೆ ಪಾದಪೂಜೆ ಮಾಡಿದ ಕುರಿತಾದ ಪತ್ರಿಕಾ ವರದಿಯನ್ನು ಆಧರಿಸಿ ಕೇರಳ ಹೈಕೋರ್ಟ್ (Kerala High Court) ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿದೆ. ತ್ರಿಪುನಿತುರಾದಲ್ಲಿ (Tripunithura) ಶ್ರೀ ಪೂರ್ಣತ್ರಯೀಸಾ ದೇವಸ್ಥಾನದಲ್ಲಿ (Sree Poornathrayeesa Temple) 12 ಮಂದಿ ಬ್ರಾಹ್ಮಣರಿಗೆ ಭಕ್ತರು ತಮ್ಮ ಪಾಪಗಳನ್ನು ಕಳೆಯಲು ಕಾಲುತೊಳೆದು ಪಾದಪೂಜೆ ಮಾಡಿದ್ದರು. ಈ ಸಂಬಂಧ ಸ್ಥಳೀಯ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.
ಆದರೆ ಶ್ರೀ ಪೂರ್ಣತ್ರಯೀಸಾ ದೇವಸ್ಥಾನದ ಅಡಳಿತ ಮಂಡಳಿ ಪರ ವಕೀಲರು ಈ ವರದಿಯನ್ನು ಅಲ್ಲಗಳೆದಿದ್ದು, ಹೀಗೆ ಬ್ರಾಹ್ಮಣರ ಪಾದಪೂಜೆ ಮಾಡಿರುವುದು ದೇವಾಲಯದ ಪ್ರಧಾನ ಅರ್ಚಕರೇ ವಿನಃ ಭಕ್ತರು ಅಲ್ಲ ಎಂದು ಹೇಳಿದ್ದಾರೆ. ಕೊಚ್ಚಿನ್ ದೇವಸ್ವಂ ಮಂಡಳಿ ಈ ಸಂಬಂಧ ಅಫಿಡವಿಟ್ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ. ಫೆಬ್ರವರಿ 25 ಕ್ಕೆ ವಿಚಾರಣೆ ಮುಂದೂಡಲಾಗಿದೆ.