ನವದೆಹಲಿ: ತುಂಬಾ ಅಪಾಯಕಾರಿ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟು ಜಾತಿ ಆಧಾರಿತ ತಾರತಮ್ಯ ತಡೆಯುವುದಕ್ಕಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಹೊರಡಿಸಿರುವ ನಿಯಮಾವಳಿಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಈ ನಿಯಮಾವಳಿಗಳ ದೂರು ಪರಿಹಾರ ವ್ಯವಸ್ಥೆಯಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಹೊರಗಿಟ್ಟಿರುವುದು ತಾರತಮ್ಯ ಉಂಟು ಮಾಡುವಂತಿದೆ. ನಿಯಮಾವಳಿಗಳು ಮುಖ್ಯವಾಗಿ ಎಸ್‌ಸಿ/ಎಸ್‌ಟಿ, ಒಬಿಸಿ, ಆರ್ಥಿಕವಾಗಿ ಹಿಂದುಳಿದವರು ಮತ್ತು ಅಂಗವೈಕಲ್ಯ ಹೊಂದಿರುವವರ ರಕ್ಷಣೆಗೆ ನಿಂತಿದ್ದು ಉಳಿದ ವರ್ಗಗಳಿಗೆ ಸಾಂಸ್ಥಿಕ ರಕ್ಷಣೆ ನೀಡುತ್ತಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಜನವರಿ 13ರಿಂದ ಜಾರಿಗೆ ಬಂದಿರುವ ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ) ನಿಯಮಾವಳಿ- 2026 ನಿಯಮಾವಳಿ ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತಿತ್ತು. ಈ ನಿಯಮದ ವಿರುದ್ಧ ದೇಶದ ಹಲವು ಕಡೆ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರು. ಸಾಮಾಜಿಕ ಜಾಲತಾಣದಲ್ಲೂ ಯುಜಿಸಿ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಸುಪ್ರೀಂ ಆದೇಶದಿಂದ ಈ ನಿಯಮಾವಳಿಗೆ ಸದ್ಯಕ್ಕೆ ತಡೆ ಬಿದ್ದಿದೆ.
ನ್ಯಾಯಾಲಯ ಹಸ್ತಕ್ಷೇಪ ಮಾಡದಿದ್ದರೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದ್ದು ಸಮಾಜದಲ್ಲಿ ವಿಭಜನೆಗೆ ಕಾರಣವಾಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು. ಮೇಲ್ನೋಟಕ್ಕೆ ನಿಯಮಗಳಲ್ಲಿರುವ ಭಾಷೆ ಅಸ್ಪಷ್ಟವಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳದಂತೆ ಭಾಷೆಯನ್ನು ತಿದ್ದುಪಡಿ ಮಾಡಲು ತಜ್ಞರು ಪರಿಶೀಲಿಸಬೇಕಾಗಿದೆ ಎಂದು ನ್ಯಾಯಾಲಯ ತಿಳಿಸಿತು.
ನಿಯಮಾವಳಿ ಸೆಕ್ಷನ್ 3(ಸಿ) ಮತ್ತು ಸೆಕ್ಷನ್ 3(ಇ) ಗಳ ನಡುವಿನ ಅಸಂಗತತೆಯನ್ನು ನ್ಯಾಯಾಲಯ ಉಲ್ಲೇಖಿಸಿತು. ತಾರತಮ್ಯವನ್ನು ವ್ಯಾಪಕವಾಗಿ ವ್ಯಾಖ್ಯಾನಿಸುವ ಸೆಕ್ಷನ್ 3 (ಇ) ಇರುವಾಗ, 3(ಸಿ) ಯ ಅಗತ್ಯವೇನು ಎಂಬ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿದೆ.
ಸ್ವಾತಂತ್ರ್ಯ ದೊರೆತು 75 ವರ್ಷಗಳಾದ ಬಳಿಕವೂ ಜಾತಿ, ವರ್ಗ ಮತ್ತು ಪ್ರದೇಶ ಆಧಾರಿತ ಭೇದಭಾವ ಮುಂದುವರಿದಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ನ್ಯಾಯಾಲಯ ಸಮಾಜವನ್ನು ವಿಭಜಿಸುವ ಯಾವುದೇ ವ್ಯವಸ್ಥೆಗಳನ್ನು ತಡೆಯಬೇಕು ಎಂದು ತಿಳಿಸಿದೆ. ಯುಜಿಸಿ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 19ಕ್ಕೆ ನಿಗದಿಪಡಿಸಿದೆ.
Laxmi News 24×7