ಹುಣಸಗಿ: ‘ಪ್ರಸಕ್ತ ಸಾಲಿನ ಕೋವಿಡ್ ಸಂದರ್ಭದಲ್ಲಿಯೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆದಿದ್ದು, ನಮ್ಮ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ’ ಎಂದು ಶಾಸಕ ರಾಜುಗೌಡ ಹೇಳಿದರು.
ಹುಣಸಗಿ ತಾಲ್ಲೂಕಿನ ಯರಿಕ್ಯಾಳ ಗ್ರಾಮದ ಬಳಿ ಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
‘ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ಸುಮಾರು ₹ 200 ಕೋಟಿ ವೆಚ್ಚದಲ್ಲಿ ಈ ಬಾರಿ ಸಿ.ಸಿ ರಸ್ತೆ, ಕಾಲುವೆ ಜಾಲದ ರಸ್ತೆ, ಕಾಲುವೆಗಳ ದುರಸ್ತಿ, ಗೇಟ್ ಅಳವಡಿಕೆ ಸೇರಿದಂತೆ ಇತರ ದುರಸ್ತಿ ಕಾಮಗಾರಿಗಳು ಕೈಗೊಳ್ಳಲಾಗಿದೆ. ಅಲ್ಲದೇ, ಯರಿಕ್ಯಾಳ ಗ್ರಾಮಕ್ಕೆ ಹಲವಾರು ವರ್ಷಗಳಿಂದಲೂ ರಸ್ತೆಯ ಸಮಸ್ಯೆ ಇತ್ತು. ಆದ್ದರಿಂದ ಆ ಗ್ರಾಮದ ಜನರಿಗೆ ರಸ್ತೆ ಮತ್ತು ನೀರಾವರಿ ಒದಗಿಸುವ ನಿಟ್ಟಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ಅಂದಾಜು ₹ 5 ಕೋಟಿ ವೆಚ್ಚದಲ್ಲಿ ಈ ಬ್ರೀಜ್ ಕಂ ಬ್ಯಾರೇಜ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ’ ಎಂದರು.
ಇದರಿಂದಾಗಿ ಯರಿಕ್ಯಾಳ, ಯರಿಕ್ಯಾಳ ತಾಂಡಾ, ಕುರೇಕನಾಳ ಗ್ರಾಮದ ಸುಮಾರು ನೂರಾರು ಎಕರೆ ಪ್ರದೇಶದ ರೈತರ ನೀರಾವರಿ ವಂಚಿತ ಜಮೀನುಗಳಿಗೆ ನೀರಾವರಿ ಸೌಲಭ್ಯ ಒಳಪಡಿಲಿದೆ’ ಎಂದು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ, ಮಾಜಿ ಸದಸ್ಯ ಎಚ್.ಸಿ.ಪಾಟೀಲ, ಬಸನಗೌಡ ಅಳ್ಳಿಕೋಟಿ, ಬಿ.ಎನ್.ಪೊಲೀಸ್ ಪಾಟೀಲ, ಮಲ್ಲು ನವಲಗುಡ್ಡ, ದೇವು ಗೋಪಾಳೆ, ಕನಕು ಜೀರಾಳ, ಶಾಮಸುಂದರ ಜೋಶಿ, ವೀರಸಂಗಪ್ಪ ಹಾವೇರಿ, ಬಸಣ್ಣ ಹವಾಲ್ದಾರ್ ಹಣಮಂತ್ರಾಯ ಸಾಳಿ, ಅಂಬಣ್ಣ ದೊರಿ, ಪರಮಣ್ಣ ಪೊಲೀಸ್ ಪಾಟೀಲ, ಸಂಗಣ್ಣ ಪೊಲೀಸ್ ಪಾಟೀಲ ಇದ್ದರು.