ಬೆಂಗಳೂರು, ಏ.28- ಸಾಕು ಪ್ರಾಣಿಗಳಾದ ಕುರಿ, ಮೇಕೆ, ಹಸು, ಎಮ್ಮೆ, ಎತ್ತು ಮುಂತಾದ ಜಾನುವಾರುಗಳು ಸತ್ತಾಗ ಹತ್ತುಸಾವಿರ ರೂಪಾಯಿವರೆಗೆ ಪರಿಹಾರ ನೀಡುವ ಅನುಗ್ರಹ ಯೋಜನೆಯನ್ನು ಹಣದ ಕೊರತೆಯ ನೆಪಹೇಳಿ ನಿಲ್ಲಿಸಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಅನುಗ್ರಹ ಯೋಜನೆಗೆ ಅವಶ್ಯಕ ಅನುದಾನ ಒದಗಿಸಿ ಜಾನುವಾರು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮೇಣಗುಡ್ಡದ ಬಳಿ ಕರಬೂಜ ಹಣ್ಣು ಹಾಗೂ ಬಳ್ಳಿಯನ್ನು ತಿಂದು ರಾಮಕೃಷ್ಣಪ್ಪ ಎಂಬ ಕುರಿಗಾರರಿಗೆ ಸೇರಿದ ಸುಮಾರು 60 ಕುರಿಗಳು ಸತ್ತಿವೆ. ಈ ರೀತಿಯ ಪ್ರಕರಣಗಳು ರಾಜ್ಯಾದ್ಯಂತ ಸಂಭವಿಸುತ್ತಿವೆ. ಇದರಿಂದ ಪಶುಪಾಲಕರು ತೀವ್ರ ರೀತಿಯ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಆಕಸ್ಮಿಕವಾಗಿ ಕುರಿ, ಮೇಕೆ, ಹಸು, ಎಮ್ಮೆ ಎತ್ತು ಮುಂತಾದ ಜಾನುವಾರುಗಳು ಸತ್ತರೆ ಗರಿಷ್ಠ 10 ಸಾವಿರ ರೂ.ವರೆಗೆ ಪರಿಹಾರ ನೀಡುವ ಅನುಗ್ರಹ ಯೋಜನೆ ಜಾರಿಗೆ ತಂದಿದ್ದೆವು. ಇದು ಪರಿಣಾಮಕಾರಿಯಾಗಿತ್ತು. ಇದರಿಂದ ಪಶು ಪಾಲಕರಿಗೆ ಸಣ್ಣದೊಂದು ಭದ್ರತೆಯ ಭರವಸೆ ಇತ್ತು ಎಂದಿದ್ದಾರೆ.
ಈ ಯೋಜನೆಗೆ ನೂರಾರು ಕೋಟಿ ರೂ.ಅನುದಾನದ ಅವಶ್ಯಕತೆಯೂ ಇರುವುದಿರುವುದರಿಂದ ಯಾವುದೇ ಕಾರಣಕ್ಕೂ ಅನುಗ್ರಹ ಯೋಜನೆಯನ್ನು ನಿಲ್ಲಿಸಿ ಪಶುಪಾಲಕರ ವಿರೋಧಿ ನಿಲುವನ್ನು ಸರ್ಕಾರ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.