ರಾಯಚೂರು: ನಗರದ ಜಿಲ್ಲಾ ಪಂಚಾಯತ್ ಕಚೇರಿಗೆ ಕೊರೊನಾ ಸೋಂಕಿನ ಭೀತಿ ಎದುರಾಗಿದೆ. ಕೊರೊನಾ ಸೋಂಕಿತನ ಸಂಪರ್ಕಿತನೋರ್ವ ಕಚೇರಿ ತುಂಬಾ ಓಡಾಡಿರುವ ವಿಷಯ ತಿಳಿದ ಬಳಿಕ ಕಚೇರಿ ಸಿಬ್ಬಂದಿ ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪಂಚಾಯತಿ ಕಚೇರಿ ಹಾಗೂ ಆವರಣವನ್ನ ಡಿಸ್ ಇನ್ಫೆಕ್ಷನ್ ಮಾಡಲಾಗಿದೆ. ಸೋಂಕಿತನ ಸಂಪರ್ಕಿತ ಬಂದು ಹೋದಮೇಲೆ ರಾಸಾಯನಿಕ ಸಿಂಪಡಣೆ ಮೂಲಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಕಚೇರಿಯ ಎಲ್ಲಾ ಕೊಠಡಿ, ಸಭಾಂಗಣದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಾಸಾಯನಿಕ ಸಿಂಪಡಣೆ ಕಾರ್ಯ ನಡೆದಿದೆ. ಪ್ರತಿನಿತ್ಯ ನೂರಾರು ಜನ ಕಚೇರಿಗೆ ಬರುವುದರಿಂದ ಕೊರೊನಾ ಭೀತಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸಮುದಾಯಕ್ಕೂ ಹರಡುವ ಮಟ್ಟಕ್ಕೆ ಹೆಚ್ಚಾಗುತ್ತಿದ್ದು ಸರ್ಕಾರಿ ಕಚೇರಿಗಳಿಗೆ ಕೊರೊನಾ ವೈರಸ್ ಭೀತಿ ಹೆಚ್ಚಾಗಿದೆ.
ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ಈಗಾಗಲೇ 517 ಕ್ಕೇರಿದೆ. ಇಂದು 40ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳ ದಾಖಲಾಗುವ ಸಾಧ್ಯತೆಯಿದೆ. ಅಲ್ಲದೆ ಐಎಲ್‍ಐ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದರಿಂದ ಕೊರೊನಾ ವೈರಸ್ ಸಮುದಾಯಕ್ಕೆ ಹರಡಿದೆಯಾ ಅನ್ನೋ ಆತಂಕ ಜಿಲ್ಲೆಯ ಜನರಿಗೆ ಎದುರಾಗಿದೆ.