ಬೆಂಗಳೂರು(ಏ. 29): ಲಾಕ್ಡೌನ್ ನಿಯಮಗಳ ಕಟ್ಟುನಿಟ್ಟು ಅನುಷ್ಠಾನ ಆಗುತ್ತಿರುವಂತೆಯೇ ಬಹುತೇಕ ಮಂದಿಯ ಬಳಿ ಈಗ ಮಾಸ್ಕ್ ಬಂದಿದೆ. ಮಾಸ್ಕ್ ಧರಿಸದೇ ಮನೆಯಿಂದ ಹೊರಬರುವವರ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ, ಸಾಕಷ್ಟು ಸಂಖ್ಯೆಯಲ್ಲಿ ಮಾಸ್ಕ್ಗಳಿವೆ. ಈಗ ಈ ಮಾಸ್ಕ್ಗಳಿಂದಲೇ ಹೊಸದೊಂದು ಸಮಸ್ಯೆ ಎದುರಾಗಿದೆ. ಜನರು ಮಾಸ್ಕ್ಗಳನ್ನ ಕಸದೊಂದಿಗೆ ಬೆರೆಸಿ ಎಸೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂಥ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಮಾಸ್ಕ್ಗಳಲ್ಲಿ ಕೊರೋನಾ ವೈರಸ್ ಇದ್ದರೆ ಬಹಳ ಬೇಗ ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕಸ ವಿಲೇವಾರಿ ನಿಯಮಗಳನ್ನ ಇನ್ನಷ್ಟು ಕಟ್ಟುನಿಟ್ಟುಗೊಳಿಸಿದೆ.
ಹಸಿ ಕಸ ಅಥವಾ ಒಣ ಕಸಗಳ ಜೊತೆ ಮಾಸ್ಕ್ಗಳನ್ನ ಇಟ್ಟು ಕೊಡಬಾರದು. ಹಾಗೆ ಮಾಡಿದರೆ 2 ಸಾವಿರ ರೂ ವರೆಗೂ ದಂಡ ವಿಧಿಸಲಾಗುವುದು. ಹಾಗೂ ಆ ಮನೆಯ ಕಸವನ್ನೇ ಸ್ವೀಕರಿಸಲಾಗುವುದಿಲ್ಲ ಎಂದು ಬಿಬಿಎಂಪಿ ಹೇಳಿದೆ. ಮಾಸ್ಕ್ಗಳನ್ನು ಸ್ಯಾನಿಟರಿ ತ್ಯಾಜ್ಯಗಳೆಂದು ಪರಿಗಣಿಸಿ ಪ್ರತ್ಯೇಕಗೊಳಿಸಬೇಕು ಎಂದು ಸೂಚಿಸಿದೆ.
ಕೆಲ ತಜ್ಞರು ಕಸದೊಂದಿಗೆ ಮಾಸ್ಕ್ ಬೆರೆಸಿದಾಗ, ಅದನ್ನು ವಿಂಗಡಣೆ ಮಾಡುವ ಪೌರ ಕಾರ್ಮಿಕರಿಗೆ ಕೊರೋನಾ ಸೋಂಕುವ ಅಂಟು ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಆಡಳಿತ ಈ ಕ್ರಮ ಕೈಗೊಂಡಿದೆ.
ಸಾರ್ವಜನಿಕರು ರೆಗ್ಯುಲರ್ ಕಸದ ಜೊತೆ ಮಾಸ್ಕ್ ಮಿಶ್ರಣಗೊಳಿಸಿ ಕೊಟ್ಟರೆ ಮೊದಲ ಬಾರಿ ಅವರಿಗೆ 1 ಸಾವಿರ ರೂ ದಂಡ ವಸೂಲಿ ಮಾಡಬೇಕು. ಆ ದಿನ ಅವರ ಮನೆಯ ಕಸವನ್ನು ಹಿಂದಿರುಗಿಸಬೇಕು. ಎರಡನೇ ಬಾರಿ ಆ ತಪ್ಪು ಪುನಾವರ್ತನೆ ಆದರೆ 2 ಸಾವಿರ ರೂ ದಂಡ ಹಾಕಬೇಕು. ಹಾಗೂ ಆ ಮನೆಯಿಂದ ಮತ್ತೆ ಕಸ ಪಡೆಯಬಾರದು ಎಂದು ಪೌರ ಕಾರ್ಮಿಕರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸಾರ್ವಜನಿಕವಾಗಿ ಉಗುಳಿದರೆ, ಮಲ ವಿಸರ್ಜನೆ ಮಾಡಿದರೆ ದಂಡ ಹಾಕಲಾಗುತ್ತಿತ್ತು. ಈಗ ಸಾರ್ವಜನಿಕವಾಗಿ ಉಗುಳಿದರೂ ದಂಡ ವಿಧಿಸಲಾಗುತ್ತದೆ. ಉಗುಳುವುದರಿಂದ ಕೊರೋನಾ ಹರಡುವ ಸಾಧ್ಯತೆ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಬಟ್ಟೆಯಿಂದ ಮಾಸ್ಕ್ ಮಾಡಿಕೊಂಡರೆ ಅದನ್ನು ಆಗಾಗ್ಗೆ ಸೋಪಿನಿಂದ ತೊಳೆದು ಬಳಕೆ ಮಾಡಿಕೊಳ್ಳಬಹುದು. ಕೆಲ ದಿನಗಳ ನಂತರ ಅದನ್ನು ಕಸಕ್ಕೆ ಹಾಕುವ ಬದಲು ಸುಟ್ಟು ಹಾಕಬಹುದು ಎಂಬ ಸಲಹೆಗಳನ್ನು ತಜ್ಞರು ನೀಡಿದ್ದಾರೆ.