ಹಾಸನ: ರಾಜಕಾರಣಿಗಳು ವಾಗ್ದಾಳಿ ನಡೆಸುವ ಬರದಲ್ಲಿ ಮಾತಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ ಎಂಬುದು ಪದೇ ಪದೇ ಗೋಚರಿಸುತ್ತಿರುತ್ತದೆ. ಆದರೆ ಅದು ಮಾಜಿ ಪ್ರಧಾನಿಯೊಬ್ಬರ ಸಾವನ್ನು ಬಯಸುವ ಮಟ್ಟಕ್ಕೆ ಹೋಗುತ್ತದೆ ಎಂಬುದು ವಿಪರ್ಯಾಸ. ಇಂಥದ್ದೊಂದು ವಿವಾದವನ್ನು ಸೃಷ್ಟಿಸಿದ್ದಾರೆ ಮಾಜಿ ಶಾಸಕ ಕೆ.ಎನ್.ರಾಜಣ್ಣ.
ಸಮಾರಂಭವೊಂದರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಕೆ.ಎನ್ ರಾಜಣ್ಣ, ಪರೋಕ್ಷವಾಗಿ ದೇವೇಗೌಡರ ಸಾವಿನ ಬಗ್ಗೆ ಮಾತನಾಡಿದ್ದು, ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ.
ಹೆಚ್.ಡಿ.ದೇವೇಗೌಡರು ಈಗಾಗಲೇ ಇಬ್ಬರ ಹೆಗಲ ಮೇಲೆ ಕೈ ಹಾಕಿಕೊಂಡು ಹೋಗ್ತಾರೆ. ನಾಲ್ವರ ಮೇಲೆ ಹೋಗುವ ಕಾಲ ಹತ್ತಿರದಲ್ಲಿಯೇ ಬರಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಸಾವನ್ನೇ ಬಯಸಿದಂತಿದೆ ಮಾಜಿ ಶಾಸಕರು.
ರಾಜಣ್ಣ ಹೇಳಿಕೆಗೆ ಕೆರಳಿ ಕೆಂಡವಾಗಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ತಮ್ಮ 90ನೇ ವರ್ಷದಲ್ಲಿಯೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ರಾಜ್ಯದ ಜನತೆಯ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಪಕ್ಷ ಸಂಘಟನೆಗಾಗಿ ಸ್ವತ: ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಅಂತಹ ಮಹಾನುಭಾವರ ಬಗ್ಗೆ ಈ ರೀತಿ ಮಾತನಾಡಿರುವುದು ಖಂಡನೀಯ. ರಾಜಣ್ಣ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ದೇವೇಗೌಡರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕೆ.ಎನ್.ರಾಜಣ್ಣ ವಿರುದ್ಧ ಜೆಡಿಎಸ್ ಪ್ರತಿಭಟಕೆಗೆ ಕರೆ ನೀಡಿದೆ. ರಾಜಣ್ಣ ವಿರುದ್ಧ ನಾಳೆ ಮಧುಗಿರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಶಾಸಕ ವೀರಭದ್ರಯ್ಯ ಕರೆ ನೀಡಿದ್ದಾರೆ.