ಬೆಂಗಳೂರು: ದೇಶದ ಮಶೀನ್ ಟೂಲ್ ಉತ್ಪಾದನೆಯಲ್ಲಿ ರಾಜ್ಯವು ಶೇಕಡ 52ರಷ್ಟು ಪಾಲು ಹೊಂದಿದ್ದು, ತಯಾರಿಕೆ ವಲಯದಲ್ಲಿ ಕರ್ನಾಟಕವು ನಾವೀನ್ಯತೆ ಮತ್ತು ಉತ್ಕೃಷ್ಟತೆಗಳಿಗೆ ಇನ್ನೊಂದು ಹೆಸರಾಗಿದೆ. ಹೀಗಾಗಿ, ಸರಕಾರವು ಇವುಗಳ ಬಲವರ್ಧನೆಗೆ ನಿರ್ದಿಷ್ಟ ವಿಷನ್ ಗ್ರೂಪ್ ರಚಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ತುಮಕೂರು ರಸ್ತೆಯ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಏರ್ಪಾಡಾಗಿರುವ ಮಶೀನ್ ಟೂಲ್ ಮತ್ತು ಮ್ಯಾನುಫ್ಯಾಕ್ಚರಿಂಗ್ ವಾಣಿಜ್ಯ ಪ್ರದರ್ಶನದ ಮೇಳ ಇಮ್ಟೆಕ್ಸ್-2025ರ ಉದ್ಘಾಟನಾ ಸಮಾರಂಭದಲ್ಲಿ ಅವರು ಗುರುವಾರ ಮಾತನಾಡಿದರು.
ದೇಶದಲ್ಲಿ ಇವೆರಡೂ ವಲಯಗಳ ವಾರ್ಷಿಕ ವಹಿವಾಟು 2030ರ ಹೊತ್ತಿಗೆ 3,800 ಮಿಲಿಯನ್ ಡಾಲರ್ ಮುಟ್ಟಲಿದೆ. ಮಶೀನ್ ಟೂಲ್ ವಲಯದಲ್ಲಿ ಮಶೀನ್ ಕಟಿಂಗ್ ಶಾಖೆಯ ಪಾಲು ಶೇ.88ಕ್ಕಿಂತ ಹೆಚ್ಚಾಗಿದ್ದು, ಇದು ಹೀಗೆಯೇ ಮುಂದುವರಿಯುವ ಲಕ್ಷಣಗಳಿವೆ. ಇಡೀ ದೇಶದಲ್ಲಿ ಮಶೀನ್ ಟೂಲ್ ವಲಯಕ್ಕೆಂದೇ ಸ್ಥಾಪಿಸಿರುವ ಮಶೀನ್ ಟೂಲ್ ಪಾರ್ಕ್ ತುಮಕೂರಿನಲ್ಲಿದ್ದು, ಇದು 530 ಎಕರೆ ವಿಸ್ತಾರವಾಗಿದೆ. ಇಲ್ಲಿ ರಾಜ್ಯ ಸರಕಾರವು ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಒದಗಿಸಿದ್ದು, ದೇಶ-ವಿದೇಶಗಳ ಹೂಡಿಕೆದಾರರನ್ನು ಇದು ಆಕರ್ಷಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ವಲಯಗಳಲ್ಲಿ ಭಾರತವು ಉತ್ಪಾದನೆಯಲ್ಲಿ 9ನೇ ಸ್ಥಾನದಲ್ಲೂ, ಬಳಕೆಯಲ್ಲಿ 7ನೇ ಸ್ಥಾನದಲ್ಲೂ ಇದೆ. ಇಲ್ಲಿ ಸುಸ್ಥಿರತೆ, ಪರಿಸರಸ್ನೇಹಿ ವಿಧಾನ ಮತ್ತು ಇಂಗಾಲದ ಉತ್ಪಾದನೆ ತಗ್ಗಿಸುವ ವಿಧಾನಗಳಿಗೆ ಆದ್ಯತೆ ಕೊಡಬೇಕು. ಇದು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಆಶಯಗಳಲ್ಲೂ ಸೇರಿಕೊಂಡಿದೆ. ಇಲ್ಲದೆ ಹೋದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಹಿಂದೆ ಬೀಳುತ್ತೇವೆ ಎಂದು ಪಾಟೀಲ ನುಡಿದಿದ್ದಾರೆ.
ಕಾರ್ಯಕ್ರಮದಲ್ಲಿ ಭಾರತೀಯ ಮಶೀನ್ ಟೂಲ್ ತಯಾರಕರ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.ವಸ್ತು ಪ್ರದರ್ಶನದಲ್ಲಿ ಒಂದು ಸುತ್ತು ಹಾಕಿದ ಸಚಿವರು ಎಲ್ಲ ಉತ್ಪಾದಕರ ಜತೆಗೂ ಮಾತನಾಡಿದರು.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೂ ಈ ಸಂದರ್ಭದಲ್ಲಿ ಇದ್ದರು