ವಿಜಯಪುರ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡುತ್ತಿದ್ದಾರೆ ಎಂಬ ಭೀತಿಯಿಂದ ತೆಪ್ಪದ ಮೂಲಕ ನದಿಯಲ್ಲಿ ಹೊರಟಿದ್ದಾಗ ಬಿರುಗಾಳಿಗೆ ತೆಪ್ಪ ಮುಳುಗಿದ ಘಟನೆ ಮಂಗಳವಾರ ಸಂಜೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದು, ಓರ್ವನ ಶವ ಪತ್ತೆಯಾಗಿದೆ.
ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಏತ ನೀರಾವರಿ ಜಾಕವೆಲ್ ಬಳಿ ದುರಂತ ಸಂಭವಿಸಿದೆ. 35 ವರ್ಷದ ಪುಂಡಲೀಕ ಎನ್ ಕಂಚಿ ಎಂಬಾತನ ಶವ ಪತ್ತೆಯಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಲೇ ಪೊಲೀಸರು, ಅಗ್ನಿಶಾಮಕ ಸೇವಾ ಇಲಾಖೆಯ ಸಿಬ್ಬಂದಿ ಆಗಮಿಸಿದ್ದು, ನದಿಯಲ್ಲಿ ನಾಪತ್ತೆಯಾಗಿರುವವರ ಶೋಧ ಹಾಗೂ ರಕ್ಷಣಗೆ ಮುಂದಾಗಿದ್ದಾರೆ.
ಕೃಷ್ಣಾ ನದಿಯ ಬಳೂತಿ ಏತ ನೀರಾವರಿ ಜಾಕವೆಲ್ ಬಳಿ ಜೂಜುಕೋರರ ಗುಂಪು ಇಸ್ಪೀಟ್ ಆಟದಲ್ಲಿ ಮಗ್ನವಾಗಿತ್ತು. ಈ ವೇಳೆ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿಗೆ ಮುಂದಾಗಿದ್ದಾರೆ ಎಂಬ ಮಾಹಿತಿ ತಿಳಿದು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿ ಪಕ್ಕದಲ್ಲಿದ್ದ ಮೀನುಗಾರರ ತೆಪ್ಪದಲ್ಲಿ ನದಿಯಲ್ಲಿ ಹೊರಟಿದ್ದಾರೆ.