Breaking News

ಉಪಚುನಾವಣೆ: ಬಿಜೆಪಿ- ಕಾಂಗ್ರೆಸ್ ಸಿದ್ಧತೆ: ಸ್ಪರ್ಧೆ ಬಗ್ಗೆ ತೀರ್ಮಾನಿಸದ ಜೆಡಿಎಸ್

Spread the love

ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ವೇದಿಕೆ ಸಜ್ಜುಪಡಿಸಿಕೊಂಡಿದ್ದು, ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಜೆಡಿಎಸ್‌ ತೀರ್ಮಾನ ಇನ್ನಷ್ಟೇ ಹೊರಬೀಳಬೇಕಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳಲ್ಲೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚೇ ಇದೆ. ಬಿಜೆಪಿಯಿಂದ ದಿವಂಗತ ಸುರೇಶ್‌ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್‌, ರಮೇಶ ಕತ್ತಿ, ಪ್ರಭಾಕರ ಕೋರೆ, ಮಹಂತೇಶ ಕವಟಗಿಮಠ ಅವರ ಹೆಸರು ಮುಂಚೂಣಿಯಲ್ಲಿದ್ದರೆ, ಕಾಂಗ್ರೆಸ್‌ನಿಂದ ಸತೀಶ ಜಾರಕಿಹೊಳಿ, ಪ್ರಕಾಶ್‌ ಹುಕ್ಕೇರಿ, ಅಂಜಲಿ ನಿಂಬಾಳ್ಕರ್, ಚೆನ್ನರಾಜ್(ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ) ಅವರ ಹೆಸರು ಚಾಲ್ತಿಯಲ್ಲಿವೆ.

ಬಿಜೆಪಿ ಈಗಾಗಲೇ ಕೆಲವು ಹೆಸರುಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಿದೆ. ಅಂತಿಮವಾಗಿ ಪಕ್ಷದ ವರಿಷ್ಠರೇ ತೀರ್ಮಾನವನ್ನು ತೆಗೆದುಕೊಳ್ಳಲಿದ್ದು, ಚಾಲ್ತಿಯಲ್ಲಿ ಇಲ್ಲದ ಹೆಸರು ಹೊರಬಿದ್ದರೂ ಅಚ್ಚರಿ ಇಲ್ಲ ಎನ್ನುತ್ತವೆ ಬಿಜೆಪಿ ಮೂಲಗಳು.

ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಪ್ರತಾಪ ಗೌಡ ಪಾಟೀಲ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಉಪಚುನಾವಣೆ ಎದುರಾಗಿದೆ. ಈ ಕ್ಷೇತ್ರದಿಂದ ಪ್ರತಾಪಗೌಡ ಅವರನ್ನೇ ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್‌ನಿಂದ ಬಸನಗೌಡ ತುರವಿಹಾಳ್‌ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚು. ಇವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಬಸವಕಲ್ಯಾಣ ಕ್ಷೇತ್ರದ ಶಾಸಕರಾಗಿದ್ದ ಬಿ. ನಾರಾಯಣ ರಾವ್‌ ಅವರ ನಿಧನದಿಂದ ಉಪ ಚುನಾವಣೆ ಎದುರಾಗಿದೆ. ಇಲ್ಲೂ ಎರಡೂ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೆಸರೂ ಕೇಳಿಬಂದಿತ್ತು. ಆದರೆ ತಾವು ಆಕಾಂಕ್ಷಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯಿಂದ ಎಂ.ಜಿ.ಮೂಳೆ, ಶರಣು ಸಲಗಾರ, ಮಲ್ಲಿಕಾರ್ಜುನ ಖೂಬ. ಕಾಂಗ್ರೆಸ್‌ನಿಂದ ನಾರಾಯಣರಾವ್‌ ಪತ್ನಿ ಮಲ್ಲಮ್ಮ, ವಿಧಾನಪರಿಷತ್ತಿನ ಸದಸ್ಯರಾಗಿರುವ ವಿಜಯ್ ಸಿಂಗ್, ಚಂದ್ರಶೇಖರ ಪಾಟೀಲ ಅವರ ಹೆಸರೂ ಇವೆ.

ಬಿಜೆಪಿ ಮೂರೂ ಕ್ಷೇತ್ರಗಳಿಗೂ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನು ನೇಮಕ ಮಾಡಿದೆ. ರಾಜ್ಯದ ಸರ್ಕಾರದ ಹಿರಿಯ ಸಚಿವರಿಗೆ ಉಸ್ತುವಾರಿ ನೀಡಲಾಗಿದೆ. ಕಾಂಗ್ರೆಸ್‌ ಕೂಡ ಪ್ರಭಾವಿ ಮುಖಂಡರನ್ನು ಉಸ್ತುವಾರಿಗಳನ್ನಾಗಿ ನೇಮಿಸಿದೆ. ಎರಡೂ ಪಕ್ಷಗಳು ಇಲ್ಲಿ ಚುನಾವಣೆಗೆ ಸಿದ್ಧತೆ ನಡೆಸಿವೆ. ಪ್ರಚಾರ ಕಾರ್ಯವೂ ಆರಂಭವಾಗಿದೆ.

ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಯಾವುದೇ ಸ್ಪಷ್ಟ ತೀರ್ಮಾನ ತೆಗೆದುಕೊಂಡಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಹೇಳಿದ್ದರು. ಆ ಬಳಿಕ ತಮ್ಮ ಹೇಳಿಕೆ ಬದಲಿಸಿ, ಕಣಕ್ಕೆ ಇಳಿಸುವುದಾಗಿ ತಿಳಿಸಿದ್ದರು.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ