ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯೋಚಿಸಿ ಮಾತನಾಡುವಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ವಾರ್ನ್ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾರತ-ಚೀನಾ ಗಡಿಯಲ್ಲಿ ಬೆಳವಣಿಗೆ ಬಗ್ಗೆ ಪ್ರಧಾನಿ ಮೌನವನ್ನ ದೇಶದ್ರೋಹಕ್ಕೆ ಹೋಲಿಸಿ ಮಾತನಾಡಿದ್ದಕ್ಕೆ ಮಾಜಿ ಸಿಎಂಗೆ ಕೋಟ ತಿರುಗೇಟು ನೀಡಿದರು. ಈಗ ದೇಶದಲ್ಲಿ ತಾಕತ್ತಿನ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಸೈನಿಕರ ಬೆನ್ನಿಗೆ ನಿಂತು ಗುಂಡು ಹಾರಿಸಿ ಎಂದು ಹೇಳುವ ಪ್ರಧಾನಿ ಇದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಯುದ್ಧ ನಡೆದಾಗ ಆಗಿನ ಪ್ರಧಾನಿ ವಿದೇಶ ಪ್ರವಾಸದಲ್ಲಿದ್ದರು. ಈಗ ತಾಕತ್ತಿನ ವ್ಯಕ್ತಿ ಪ್ರಧಾನಿ ಇದ್ದಾರೆ ಇದನ್ನ ಸಿದ್ದರಾಮಯ್ಯ ಯೋಚಿಸಬೇಕು ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ದೇವಸ್ಥಾನಗಳಲ್ಲಿ ಭಕ್ತರಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ನೀಡಬೇಕು ಅಂತಾ ಆಲೋಚನೆ ಇದೆ. ಅಲ್ಲದೆ ನಾಲ್ಕು ದಿನಗಳಲ್ಲಿ ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ ತಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದರು. ಈಗ ಶುಚಿತ್ವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ ಲಾಕಡೌನ್ ಸಡಿಲವಾದರೆ ಭಕ್ತರಿಗೆ ಕರ್ಪೂರಾರ್ಚನೆ, ಪುಷ್ಪಾರ್ಚನೆಗೆ ಅವಕಾಶ ನೀಡುವ ಕುರಿತು ನಿರ್ಧಾರ ತಗೆದುಕೊಳ್ಳುತ್ತೇವೆ ಎಂದರು.