ಕುಂದಾಪುರ: ತಾಯಿ ಸಾವನ್ನಪ್ಪಿದ ವಿಷಯ ತಿಳಿದು ಒಂದೇ ಗಂಟೆಯೊಳಗೆ ಮಗನೂ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕುಂದಾಪುರದಲ್ಲಿ ಸಂಭವಿಸಿದೆ.
ಕುಂದಾಪುರದ ಸಾರ್ವಜನಿಕ ಆಸ್ಪತ್ರೆ ಬಳಿಯ ಮಹಾರಾಜ್ ಜುವೆಲ್ಲರ್‌ನ ಮಾಲಕರಾಗಿದ್ದ ದಿ| ರಮೇಶ್ ಅವರ ಪತ್ನಿ ಶಕುಂತಲಾ ಶೇಟ್ (82) ಜೂ.12 ರ ತಡರಾತ್ರಿ 12.45 ರ ಸುಮಾರಿಗೆ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಇದಾದ ಒಂದೇ ಗಂಟೆಯೊಳಗೆ ಅವರ ಪುತ್ರ ಪ್ರಶಾಂತ್ ಶೇಟ್ (45) ಅವರು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಪ್ರಸ್ತುತ ಮಹಾರಾಜ್ ಜುವೆಲ್ಲರ್‌ನ ಮಾಲಕರಾಗಿದ್ದರು.
ಶಕುಂತಲಾ ಅವರಿಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದು, ಪುರಸಭೆ ವ್ಯಾಪ್ತಿಯ ಶಾಂತಿನಿಕೇತನ ವಾರ್ಡ್‌ನಲ್ಲಿ ನೆಲೆಸಿದ್ದರು. ಮೂರನೇಯವರಾಗಿರುವ ಪ್ರಶಾಂತ್ ಅವಿವಾಹಿತರಾಗಿದ್ದರು. ಕುಂದಾಪುರದ ಜುವೆಲ್ಲರ್ಸ್ ಅಸೋಸಿಯೇಶನ್ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದರು.
ಶನಿವಾರ ನಗರದ ಚಿಕ್ಕನ್‌ಸಾಲ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಬಂಧು – ಬಾಂಧವರ ಸಮ್ಮುಖದಲ್ಲಿ ತಾಯಿ ಹಾಗೂ ಮಗನ ಅಂತ್ಯ ಸಂಸ್ಕಾರವನ್ನು ಒಟ್ಟಿಗೆ ನೆರವೇರಿಸಲಾಯಿತು.
ಗೌರವಾರ್ಥ ಬಂದ್
ಕುಂದಾಪುರದ ಜುವೆಲ್ಲರ್ಸ್
ಅಸೋಸಿಯೇಶನ್ ಸೂಚನೆಯಂತೆ ಕುಂದಾಪುರದಲ್ಲಿರುವ ಚಿನ್ನದ ಮಳಿಗೆಗಳು ಶನಿವಾರ ಬಂದ್ ಮಾಡಿ ಮೃತರಿಗೆ ಗೌರವ ಸಲ್ಲಿಸಿದರು.