ಹುಬ್ಬಳ್ಳಿ, ಜು.29- ಮಹದಾಯಿ ಯೋಜನೆಗೆ ಮೊದಲ ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮಹದಾಯಿ ಯೋಜನೆಗೆ ಮೊದಲ ಪ್ರಾಶಸ್ತ್ಯ ನೀಡುತ್ತೇನೆ. ಏನು ಮಾಡಬೇಕು ಎಂದು ನನಗೆ ಬಹಳ ಸ್ಪಷ್ಟತೆ ಇದೆ. ಗೆಜೆಟ್ ನೋಟಿಫಿಕೇಷನ್ ಸಿಕ್ಕ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಶಾಸಕರು, ಮುಖಂಡರು ಇದ್ದಾರೆ. ಎಲ್ಲರೊಂದಿಗೆ ಚರ್ಚಿಸಿ ಸಲಹೆ ಸ್ವೀಕರಿಸುತ್ತೇನೆ. ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ಅವರು ಹೇಳಿದರು.
ನಾನು ಹುಬ್ಬಳ್ಳಿಯಲ್ಲೇ ಹುಟ್ಟಿ ಬೆಳೆದವನು. ನನಗೆ ದೊಡ್ಡ ಸ್ನೇಹಿತರ ಬಳಗವೇ ಇದೆ. ಇದು ನನಗೆ ಅತ್ಯಂತ ಪ್ರೀತಿಯ ಊರು. ಸಿಎಂ ಆಗಿ ಹುಬ್ಬಳ್ಳಿಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ನಿರ್ಣಯದಿಂದ ಮುಖ್ಯಮಂತ್ರಿಯಾದೆ. ಕೇಂದ್ರದ ನಾಯಕರು ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಎಲ್ಲರ ಆಶೀರ್ವಾದದಿಂದ ಉತ್ತಮ ಕೆಲಸ ಮಾಡುತ್ತೇನೆ ಎಂದರು.
ನಾಳೆ ಕೇಂದ್ರದ ನಾಯಕರ ಭೇಟಿಗೆ ಹೋಗುತ್ತಿದ್ದೇನೆ. ಮೊದಲಿಗೆ ಅವರ ಆಶೀರ್ವಾದ ಪಡೆಯುತ್ತೇನೆ. ಕೇಂದ್ರದ ನಾಯಕರ ಜತೆ ಸಚಿವ ಸಂಪುಟದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು. ನಿನ್ನೆಯೇ ಜಗದೀಶ್ ಶೆಟ್ಟರ್ ಅವರೊಂದಿಗೆ ಮಾತನಾಡಿದ್ದೇನೆ. ಶೆಟ್ಟರ್ ವೈಯಕ್ತಿಕವಾಗಿ ಬಂದು ಚರ್ಚಿಸುವುದಾಗಿ ಹೇಳಿದ್ದಾರೆ. ಅವರು ನನಗೆ ಆತ್ಮೀಯ ಸ್ನೇಹಿತರಿದ್ದಾರೆ. ಅವರೊಂದಿಗೆ ಚರ್ಚಿಸಿ ಅವರ ಸಮಸ್ಯೆ ತಿಳಿದುಕೊಳ್ಳುತ್ತೇನೆ. ಬಳಿಕ ವರಿಷ್ಠರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಅವರು ಹೇಳಿದರು.
ನಂತರ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಕಾರವಾರ, ಅಂಕೋಲಾ ಪ್ರದೇಶಗಳಿಗೆ ತೆರಳಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಕಾಳಜಿ ಕೇಂದ್ರಗಳಿಗೂ ಸಹ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದರು. ಶಾಸಕರು, ಸಂಸತ್ ಸದಸ್ಯರು, ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಅಂಕೋಲಾದ ಸಭಾಭವನದಲ್ಲಿ ಸಭೆ ನಡೆಸಿ ತುರ್ತು ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.