ಕಾರವಾರ: ನಗರದ ಕೋಡಿಭಾಗದ ಸಾಗರ ದರ್ಶನ ಹಾಲ್ ಹಿಂಭಾಗದಲ್ಲಿ ಇಬ್ಬರು ಅಕ್ರಮವಾಗಿ ಗಾಂಜಾ ಸಾಗಾಟ, ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆ ಅಧಿಕಾರಿಗಳು ದಾಖಲಿ ನಡೆಸಿ ಇಬ್ಬರನ್ನು ಬಂಧಿಸಿದ್ದು 3.20 ಲಕ್ಷ ರೂ. ಗಾಂಜಾ ಜಪ್ತಿ ಮಾಡಿಕೊಂಡ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಸಂಕ್ರಿವಾಡಾದ ರಿಜ್ವಾನ್ ಅಕ್ಬರ್ ಶೇಖ್ (30) ಹಾಗೂ ನಗರದ ಗುನಗಿವಾಡಾದ ಸಾಹಿಲ್ ನಾದರ್ ಭಾಷಾ ಶೇಖ್ (20) ಎನ್ನುವ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಗರ ದರ್ಶನ ಹಾಲ್ ಹಿಂಭಾಗದಲ್ಲಿ ಆರೋಪಿಗಳು ಗಾಂಜಾವನ್ನು ಅಕ್ರಮವಾಗಿ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಗಳಿಂದ 3.20 ಲಕ್ಷ ರೂ. ಮೌಲ್ಯದ 3.200 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಅದರಂತೆ 65/2021 ಕಲಂ 8 (ಸಿ) ಎನ್.ಡಿ.ಪಿ.ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಪ್ರಮುಖ ಗಾಂಜಾ ಮಾರಾಟಗಾರರಾಗಿದ್ದು ಮಹಾರಾಷ್ಟ್ರದ ಪುನಾದಿಂದ ಗಾಂಜಾ ತಂದು ನಗರದ ಸಾರ್ವಜನಿಕರು, ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನುವ ವಿಷಯ ವಿಚಾರಣೆ ವೇಳೆ ತಿಳಿದುಬಂದಿದೆ. ಕಾರ್ಯಾಚರಣೆ ವೇಳೆಯಲ್ಲಿ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ನಗರ ಪಿಎಸ್‌ಐ ಸಂತೋಷಕುಮಾರ್ ಎಂ. ಸಿಪಿಐ ರಾಜೇಶ ನಾಯಕ, ಸಿಎಚ್ಸಿ ಸತ್ಯಾನಂದ ನಾಯ್ಕ, ಸಿಬ್ಬಂದಿಗಳಾದ ತುಕಾರಾಮ್ ಬಣಕಾರ್, ಹನುಮಂತ ರೆಡ್ಡರ್, ಮಹೇಶ ನಾಯ್ಕ, ನಾಮದೇವ ನಾಂದ್ರೆ, ಅರ್ಜುನ್ ದೇಸಾಯಿ, ಮಂಜುನಾಥ ಪಟಗಾರ್ ಇದ್ದರು.