ಉಡುಪಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಕಸ್ಮಿಕ ಘಟನೆಗೆ ಬಲಿಯಾಗಿದ್ದಾರೆ. ನಾವೆಲ್ಲ ಶಾಸಕರು ಜಾರಕಿಹೊಳಿ ಬಗ್ಗೆ ಅನುಕಂಪವಿಟ್ಟುಕೊಂಡಿದ್ದೇವೆ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಚಿವರು, ಸಿಡಿ ಬಹಿರಂಗ ಪ್ರಕರಣ ಇದೊಂದು ಕಾನೂನಾತ್ಮಕ ಹಾಗೂ ನೈತಿಕ ವಿಚಾರ. ನೈತಿಕವಾಗಿ ಹೊಣೆಹೊತ್ತು ಅವರು ರಾಜೀನಾಮೆ ನೀಡಿದ್ದಾರೆ. ಕಾನೂನಾತ್ಮಕವಾಗಿಯೂ ಸಮಸ್ಯೆ ಇದೆ ಎನಿಸಲ್ಲ ಎಂದರು.
ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಯುವತಿ ವರ್ತನೆ ನೋಡಿದರೆ ಇಚ್ಛಿಸಿ ಹೋದಂತೆ ಅನಿಸುತ್ತೆ. ಹೀಗಾಗಿ ರಮೇಶ್ ಜಾರಕಿಹೊಳಿಗೆ ಶಿಕ್ಷೆಯಾಗದಿರಬಹುದು. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಗತ್ಯವಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಯಾರನ್ನೂ ದೂರಲು ಸಾಧ್ಯವಿಲ್ಲ ಎಂದು ತಿಳಿಸಿದರು.