ಬೆಂಗಳೂರು: ಕೋವಿಡ್ ತುರ್ತು ಪರಿಸ್ಥಿತಿ ನಿರ್ವಹಣೆಯಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ)ವನ್ನು ಅತ್ಯುತ್ತಮವಾಗಿ ಬಳಕೆ ಮಾಡಿದ ರಾಜಧಾನಿ ಬೆಂಗಳೂರಿಗೆ ಸ್ಮಾರ್ಟ್ ಸಿಟಿ ವಿಶೇಷ ಪುರಸ್ಕಾರ ಲಭಿಸಿದೆ.
ದೇಶದ ವಿವಿಧೆಡೆ ಸ್ಮಾರ್ಟ್ ಸಿಟಿ ಯೋಜನೆ ಗಳ 6ನೇ ವಾರ್ಷಿಕೋತ್ಸವದ ನಿಮಿತ್ತ ನಡೆದ ಸ್ಪರ್ಧೆಗಳಲ್ಲಿ ಕೇಂದ್ರ ಸರಕಾರದ ವತಿಯಿಂದ ಈ ಪುರಸ್ಕಾರ ನೀಡಲಾಗಿದೆ. ಕಾಮಗಾರಿಗಳಲ್ಲಿ ಪದವೀಧರರಿಗೆ ಇಂಟರ್ನ್ ಶಿಪ್ ನೀಡುವ ಯೋಜನೆಯ ವಿಭಾಗದಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿಯನ್ನು ರನ್ನರ್ ಅಪ್ ಎಂದು ಘೋಷಿಸಲಾಗಿದೆ. ಹವಾಮಾನ ಮೌಲ್ಯಮಾಪನಕ್ಕೆ ಸಂಬಂಧಿಸಿ ರಾಷ್ಟ್ರ ಮಟ್ಟದಲ್ಲಿ ತ್ರೀ ಸ್ಟಾರ್ ನೀಡಲಾಗಿದೆ.
ಡಿಜಿಟಲ್ ಗ್ರಂಥಾಲಯಕ್ಕೆ ಪ್ರಶಸ್ತಿ
ತುಮಕೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಡಿಜಿಟಲ್ ಗ್ರಂಥಾಲಯ ಪ್ರಶಸ್ತಿ ಲಭಿಸಿದೆ. ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಅನುಷ್ಠಾನ ಗೊಂಡಿರುವ ಉತ್ತಮ ಯೋಜನೆಗಳ ಪೈಕಿ ಅತ್ಯುತ್ತಮ ಡಿಜಿಟಲ್ ಲೈಬ್ರರಿ ಇದು ಎಂದು ಗುರುತಿಸಲಾಗಿದೆ. ಅಪರೂಪದ ಪುಸ್ತಕಗಳು ಈ ಡಿಜಿಟಲ್ ಲೈಬ್ರರಿಯಲ್ಲಿವೆ. ವಿವಿಧ ಕ್ಷೇತ್ರ ಮತ್ತು ಕೋರ್ಸ್‌ಗಳಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಈ ಡಿಜಿಟಲ್ ಗ್ರಂಥಾಲಯದಲ್ಲಿ ಸಂಗ್ರಹಿಸಲಾಗಿದೆ.