ಹಾಸನ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಇದೆ ಅಂದ್ರೆ ಅದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಅಂತೆ. ಅವರಿಲ್ಲ ಅಂದ್ರೆ ಇಡೀ ಪಕ್ಷವೇ ಝೀರೋ ಆಗುತ್ತಂತೆ…
ಹೌದು, ಹೀಗಂತ ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಇಲ್ಲ ಅಂದಿದ್ರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಎಂದೋ ಮುಳುಗಿ ಹೋಗುತ್ತಿತ್ತು. ಸಿದ್ದರಾಮಯ್ಯ ಕೈ ಬಿಟ್ರೆ ಈಗಲೂ ಮುಳುಗುತ್ತೆ. ಸದ್ಯ ಕಾಂಗ್ರೆಸ್ನನ್ನು ಶೇ.70ಕ್ಕೆ ನಿಲ್ಲಿಸಿರೋದು ಸಿದ್ದರಾಮಯ್ಯ. ಅವರಿಲ್ಲ ಅಂದ್ರೆ ಕಾಂಗ್ರೆಸ್ ಝೀರೋ. ಈ ಬಗ್ಗೆ ನನಗೆ ಹೇಳೋಕೆ ನನಗೇನು ಭಯವಿಲ್ಲ, ನೇರವಾಗಿಯೇ ಹೇಳ್ತೀನಿ ಎಂದರು
ದಿನ ಬೆಳಗಾದ್ರೆ ಸೀಮೆಎಣ್ಣೆ ಡಬ್ಬ ಹಿಡ್ಕೊಂಡ್ರೆ ಏನ್ ಮಾಡೋಕೆ ಆಗುತ್ತೆ. ಅದಕ್ಕೆ ಕಾಂಗ್ರೆಸ್ ಮುಳುಗಿ ಹೋಗ್ತಿರೋದು. ನಿತ್ಯ ಪ್ರತಿಭಟನೆ ಮಾಡಿಬಿಟ್ಟರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿಯುತ್ತಾರಾ? ದೇವೇಗೌಡರನ್ನ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದೇ ಕಾಂಗ್ರೆಸ್. ಆ ಶಾಪ ಕಾಂಗ್ರೆಸ್ ಮೇಲಿದೆ ಎಂದ ಎಚ್ಡಿ ರೇವಣ್ಣ, ಕಾಂಗ್ರೆಸ್ ಮುಖಂಡರೇ ಈ ರಾಜ್ಯದ ಮುಖ್ಯಮಂತ್ರಿ ಉಳಿಬೇಕು ಅಂತ ಹೇಳಿದ್ದಾರೆ. ಜೆಡಿಎಸ್ ಮತ್ತು ದೇವೇಗೌಡರನ್ನ ಮುಗಿಸಲು ಹೀಗೆ ಮಾಡಿದ್ದಾರೆ ಎಂದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನೆಗೆ ಕೊಟ್ಟಿದ್ದ ಭೇಟಿ ರಾಜಕೀಯ ಉದ್ದೇಶ ಅಲ್ಲ, ಹೊಳೆನರಸೀಪುರ ಪೊಲೀಸ್ ಠಾಣೆ ವಿಚಾರಕ್ಕೆ ಹೋಗಿದ್ದೆ ಎಂದರು.