ಚನ್ನಪಟ್ಟಣ (ಜೂನ್ 14): ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದಕ್ಕೆ ಏರಿಕೆಯಾಗುತ್ತಲೇ ಇದೆ. ಕೊರೋನಾ ಸಂಕಷ್ಟ ಮತ್ತು ಲಾಕ್ಡೌನ್ ಸಮಸ್ಯೆಯ ನಡುವೆಯೂ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಹೆಚ್ಚಿಸುತ್ತಲೇ ಇದೆ. ಪರಿಣಾಮ ದಿನೋಪಯೋಗಿ ವಸ್ತುಗಳ ಬೆಲೆಯೂ ಏರುತ್ತಲೇ ಇದ್ದು, ಜನ ಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ವಿರೋಧ ಪಕ್ಷಗಳು ಸತತ ವಾಗ್ದಾಳಿ ನಡೆಸುತ್ತಲೇ ಇದೆ. ಈ ನಡುವೆ ಇಂದು ರಾಮನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಸಂಸದ ಡಿ.ಕೆ. ಸುರೇಶ್, “ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದೆ. ಇದರಿಂದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಕರೆಂಟ್ ಬಿಲ್, ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಮಾಡುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಸಂಸದ ಡಿ.ಕೆ. ಸುರೇಶ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದ ಹಲವೆಡೆ ಆಶಾಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಫುಡ್ ಕಿಟ್ ವಿತರಣೆ ಮಾಡಿದ ಡಿ.ಕೆ. ಸುರೇಶ್ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ತೀವ್ರತರವಾಗಿ ಕಿಡಿಕಾರಿದರು. “ಈ ಸರ್ಕಾರಕ್ಕೆ ಕರೆಂಟ್ ಬಿಲ್ ಕಡಿಮೆ ಮಾಡುವ ಯೋಗ್ಯತೆ ಇಲ್ಲ. ಪೆಟ್ರೋಲ್, ಡೀಸೆಲ್, ಪ್ರಾಪರ್ಟಿ ಟ್ಯಾಕ್ಸ್ ಕಡಿತ ಮಾಡುವ ಯೋಗ್ಯತೆ ಇಲ್ಲ. ಆದರೆ, ಇವರು ಖಾಸಗಿ ಶಾಲೆಗಳ ಮೇಲೆ ಒತ್ತಡ ಹಾಕ್ತಿದ್ದಾರೆ. ಇವರ ಬಳಿ ಇರುವುದನ್ನ ಕಡಿತ ಮಾಡಲು ಇವರಿಗೆ ಆಗ್ತಿಲ್ಲ. ಆದರೆ ಖಾಸಗಿಯವರಿಗೆ ಒಂದು ನ್ಯಾಯ, ಸರ್ಕಾರಕ್ಕೆ ಒಂದು ನ್ಯಾಯ” ಎಂದು ಕಿಡಿಕಾರಿದ್ದಾರೆ.
