ಬೆಂಗಳೂರು: ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಯಡಿಯೂರಪ್ಪನವರು ಪ್ರತಿ ದಿನ ಕೊರೊನಾ ನಿಯಂತ್ರಣ ಸಂಬಂಧ ಅಧಿಕಾರಿಗಳು, ತಜ್ಞರ ಜೊತೆ ಸಭೆ ನಡೆಸುತ್ತಿದ್ದರು. ಅಷ್ಟೇ ಅಲ್ಲದೇ ಪ್ರತಿ ದಿನ ಸಿಎಂ ಭೇಟಿಗೆ ಗಣ್ಯರು ಸಹ ಆಗಮಿಸುತ್ತಿದ್ದರು. ಹೀಗಾಗಿ ಪ್ರತಿ ಭಾನುವಾರ ಸಿಎಂಗೆ ಕೋವಿಡ್ ಪರೀಕ್ಷೆ ನಡೆಯುತ್ತಿತ್ತು. ನಿನ್ನೆ ನಡೆದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.
ಭಾನುವಾರ ರಾತ್ರಿ ಟ್ವೀಟ್ ಮಾಡಿದ್ದ ಸಿಎಂ, ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನೆ ಎಂದು ಕೇಳಿಕೊಂಡಿದ್ದರು
ಕೋವಿಡ್ ಸೋಂಕಿಗೆ ಒಳಗಾದ ದೇಶದ ಎರಡನೇ ಮುಖ್ಯಮಂತ್ರಿ ಯಡಿಯೂರಪ್ಪ ಆಗಿದ್ದಾರೆ. ಈ ಮೊದಲು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸೋಂಕು ಬಂದಿತ್ತು.
ಸಿಎಂ ಯಡಿಯೂರಪ್ಪನರಿಗೆ ಸೋಂಕು ತಿಳಿದ ವಿಚಾರ ಕೇಳಿ ಸಚಿವರಾದ ಸುಧಾಕರ್, ಅಶ್ವಥ್ ನಾರಾಯಣ್, ಮಾಜಿ ಸಿಎಂ ಸಿದ್ದರಾಮಯ್ಯ, ಬಿಎಲ್ ಸಂತೋಷ್ ಸೇರಿದಂತೆ ಹಲವು ಗಣ್ಯರು ಚೇತರಿಕೆಯಾಗಲಿ ಎಂದು ಹಾರೈಸಿದ್ದಾರೆ.