ಮಡಿಕೇರಿ: ನಗರದ ಆರ್ಮಿ ಕ್ಯಾಂಟೀನ್ ಎದುರು ವಸ್ತುಗಳ ಖರೀದಿಗಾಗಿ ಸಾಲಿನಲ್ಲಿ ನಿಂತಿದ್ದ ಮಾಜಿ ಸೈನಿಕರ ದೃಶ್ಯಾವಳಿ ಸೆರೆ ಹಿಡಿಯುತ್ತಿದ್ದ ಜಿಲ್ಲೆಯ ಇಬ್ಬರು ಯುವ ಪತ್ರಕರ್ತರ ಮೇಲೆ ಪೊಲೀಸರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರಿಗೆ ದೂರು ಸಲ್ಲಿಸಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಂಘ, ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ವರದಿಗಾರರಾದ ಜಿ.ಆರ್.ಪ್ರಜ್ಞಾ ಹಾಗೂ ಶಕ್ತಿ ದಿನಪತ್ರಿಕೆಯ ವರದಿಗಾರರಾದ ಜಿ.ಆರ್.ಪ್ರಜ್ವಲ್ ಅವರುಗಳು ಮೊಬೈಲ್ ಕ್ಯಾಮರಾ ಮೂಲಕ ಚಿತ್ರೀಕರಣಕ್ಕೆ ತೊಡಗಿದ್ದಾಗ ಪೊಲೀಸರು ಐಡಿ ಕಾರ್ಡ್ ಇಲ್ಲವೆಂದು ಗದರಿಸಿದ್ದಲ್ಲದೆ ಏಕವಚನ ಬಳಕೆ ಮಾಡಿ ಮೊಬೈಲ್ ಕಸಿದುಕೊಂಡು ಹಲ್ಲೆ ಯತ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಇದಕ್ಕೆ ಪೂರಕವಾದ ವಿಡಿಯೋಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.
Laxmi News 24×7