ಹುಬ್ಬಳ್ಳಿ: ಕಾಂಗ್ರೆಸ್ ದೇಶದ ಜನತೆಯ ಆತ್ಮಬಲ ಕುಗ್ಗಿಸುವ ಹಾಗೂ ದೇಶಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್ ಮಾಡಿರುವ ಟೂಲ್ ಕಿಟ್ ವಿಚಾರಕ್ಕೆ ನಗರದಲ್ಲಿಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಜೋಶಿ, ಕೊರೊನಾ ವೈರಸ್ ಹುಟ್ಟಿದ್ದೇ ಚೀನಾದಲ್ಲಿ. ಆದರೆ ಕಾಂಗ್ರೆಸ್ ನಾಯಕರಾಗಲಿ, ಕಮ್ಯುನಿಸ್ಟ್ ನವರಾಗಲಿ ಅದನ್ನು ಚೀನಾ ವೈರಸ್ ಎನ್ನಲಿಲ್ಲ. ಬದಲಿಗೆ ಮೋದಿ ವೈರಸ್ ಎಂದು ಬಿಂಬಿಸಲು ಹೊರಟಿದ್ದಾರೆ. ಪ್ರಧಾನಿ ಮೋದಿಯವರನ್ನು ತೇಜೋವಧೆ ಮಾಡುವ ಭರದಲ್ಲಿ ಕಾಂಗ್ರೆಸ್ ನಾಯಕರು ಭಾರತಕ್ಕೆ ಅಪಮಾನ ಮಾಡುತ್ತಿದ್ದಾರೆ. ಭಾರತದ ಮಾನ, ಮರ್ಯಾದೆ ಹೋದರೂ ಚಿಂತೆಯಿಲ್ಲ, ಮೋದಿ ಅವರಿಗೆ ಡ್ಯಾಮೇಜ್ ಆದರೆ ಸಾಕು ಅಂತಿದ್ದಾರೆ. ಕಾಂಗ್ರೆಸ್ ಈ ರೀತಿಯ ಕೀಳುಮಟ್ಟದ ರಾಜಕಾರಣ ಮಾಡಬಾರದು ಎಂದು ಕಿಡಿಕಾರಿದರು.
ಕೊರೊನಾವನ್ನು ಮೋದಿ ವೈರಸ್ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಇದು ಕಾಂಗ್ರೆಸ್ ನ ಕ್ಷುಲ್ಲಕ ಮನೋಭಾವ ತೋರಿಸುತ್ತೆ, ಕಾಂಗ್ರೆಸ್ ದೇಶದಲ್ಲಿ ಯಾವ ಸ್ಥಿತಿಯಲ್ಲಿದೆ ಅನ್ನೋದನ್ನು ತಿಳಿದುಕೊಳ್ಳಬೇಕು ಎಂದು ಹರಿಹಾಯ್ದರು.
ಲೋಕಸಭೆ ಚಳಿಗಾಲದ ಅಧಿವೇಶನ ನಡೆದೇ ನಡೆಯುತ್ತೆ. ಇದನ್ನು ಸಂಸತ್ ನಲ್ಲಿಯೇ ಚರ್ಚಿಸಬಹುದಾಗಿತ್ತು. ಈಗ ಜನರ ಮನೋಬಲ ಕುಗ್ಗಿಸುವ ಕೆಲಸ ಮಾಡಬಾರದಾಗಿತ್ತು. ದೇಶಕ್ಕೆ ಅಪಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಬಾರದು. ಪಿಎಂ ಕೇರ್ ನಿಂದ ಖರೀದಿಸಿದ ವೆಂಟಿಲೆಟರ್ ಕಳಪೆ ಎಂದು ಬಿಂಬಿಸುತ್ತಿರುವುದು ದುರದೃಷ್ಟಕರ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.