ಬೆಂಗಳೂರು, ಮೇ12-ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೋವಿಡ್ ಸೋಂಕಿತರಿಗೆ ಮನೆ ಬಾಗಿಲಿಗೇ ಓಲಾ ಕ್ಯಾಬ್‌ಗಳ ಮೂಲಕ ಆಮ್ಲಜನಕ ಸಾಂದ್ರಕಗಳನ್ನು (Oxygen Concentrator) ಒದಗಿಸುವ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು.
ಮೊದಲು ಬೆಂಗಳೂರಿನಲ್ಲಿ ಈ ವ್ಯವಸ್ಥೆ ಆರಂಭವಾಗುತ್ತಿದ್ದು, ಕ್ರಮೇಣ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ. ಈ ಕೆಲಸದಲ್ಲಿ ಸರ್ಕಾರದ ಜತೆ ಗಿವ್ ಇಂಡಿಯಾ ಹಾಗೂ ಓಲಾ ಕ್ಯಾಬ್ ಕಂಪನಿಗಳು ಕೈಜೋಡಿಸಿವೆ.ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ, ಇಡೀ ರಾಜ್ಯದಲ್ಲಿಯೇ ಮೊತ್ತ ಮೊದಲಿಗೆ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಕೆಲಸವನ್ನು ನಾನು ಆರಂಭ ಮಾಡಿದೆ. ಅದಕ್ಕೆ ಉತ್ತಮ ಫಲಿತಾಂಶ ಸಿಕ್ಕಿತು. ಈಗ ಇಡೀ ಬೆಂಗಳೂರಿಗೆ ವಿಸ್ತರಿಸುತ್ತಿದ್ದು, ಅದಕ್ಕೆ ಓಲಾ ಸಹಕಾರ ನೀಡುತ್ತಿರುವುದು ಖುಷಿಯ ವಿಚಾರ ಎಂದರು.
