ಹುಬ್ಬಳ್ಳಿ ಬೆಳಗಾವಿ: ಎರಡನೇ ಹಂತದ ಕೋವಿಡ್ ಕರ್ಫ್ಯೂಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಹನಗಳ ಸಂಚಾರ ಕೂಡ ಕಡಿಮೆಯಾಗಿದೆ. ವಿನಾಕಾರಣ ರಸ್ತೆಗಳಿದ ವಾಹನಗಳನ್ನು ಪೊಲೀಸರು ಜಪ್ತಿ ಮಾಡುತ್ತಿದ್ದಾರೆ.
ಬೆಳಿಗ್ಗೆ 7:೦೦ ಗಂಟೆಯಿಂದಲೇ ಪೊಲೀಸರು ರಸ್ತೆಗಿಳಿದಿದ್ದು, ಮಾರ್ಗಸೂಚಿ ಉಲ್ಲಂಘಿಸಿ ಅಗತ್ಯ ವಸ್ತುಗಳ ಖರೀದಿಗೆ ತಂದಿದ್ದ ಸುಮಾರು 87 ವಾಹನಗಳನ್ನು ಜಪ್ತಿ ಮಾಡಲಾಗಿದೆ. 10 ಗಂಟೆಯ ನಂತರ ಚೆಕ್ ಪೋಸ್ಟ್ ಗಳನ್ನು ಬಿಗಿಗೊಳಿಸಿ ಪ್ರತಿಯೊಂದು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಕಾಲ್ನಡಿಗೆಯಲ್ಲಿ ಬಂದವರನ್ನು ಕೂಡ ವಿಚಾರಿಸಲಾಗುತ್ತಿದೆ.
ಮಹಾನಗರ ಪೊಲೀಸ್ ಆಯುಕ್ತ ಲಾಭೂ ರಾಮ, ಡಿಸಿಪಿ ಕೆ.ರಾಮರಾಜನ್, ಬಸರಗಿ ಸೇರಿದಂತೆ ಹಿರಿಯ ಅಧಿಕಾರಿಗಳು ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಸ್ವತಃ ವಾಹನಗಳ ತಪಾಸಣೆ ನಡೆಸಿದರು. ವಿನಾಕಾರಣ ಬಂದ ವಾಹನಗಳನ್ನು ಜಪ್ತಿ ಮಾಡುವಂತೆ ಸೂಚಿಸಿದರು.
ವಿನಾಕಾರಣ ವಾದ ಮಾಡುವವರ ಮೇಲೆ ಪ್ರಕರಣ ದಾಖಲಿಸುವಂತೆ ಸೂಚಿಸಿದರು. ಕೆಲ ಅನುಮಾನಗಳಿಗೆ ಪೊಲೀಸ್ ಅಧಿಕಾರಿಗಳು ಫೋನ್ ಕರೆ ಮೂಲಕ ಖಚಿತಪಡಿಸಿಕೊಂಡು ವಾಹನಗಳನ್ನು ಬಿಟ್ಟು ಕಳುಹಿಸಿದರು. ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದರೆ ಯಾವುದೇ ಮುಲಾಜಿಯಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಲಾಭೂರಾಮ ಎಚ್ಚರಿಸಿದರು.