ಬೆಂಗಳೂರು: ಮೂವರು ಕೊಲೆ ಆರೋಪಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಸಿಲಿಕಾನ್ ಸಿಟಿಯ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸೀಲ್‍ಡೌನ್ ಮಾಡಲು ರೆಡಿಯಾಗಿದೆ.
ಈ ಮೂಲಕ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಮತ್ತೊಂದು ಸ್ಟೇಷನ್ ಸೀಲ್‍ಡೌನ್‍ಗೆ ಸಿದ್ಧತೆ ನಡೆದಿದೆ. ಪಶ್ಚಿಮ ವಿಭಾಗದ ಪೊಲೀಸರಿಗೆ ಕೊರೊನಾ ಕಂಟಕವಾಗಿದೆ. ಡಿಸಿಪಿ ಕಚೇರಿ, ಎಸಿಪಿ ಕಚೇರಿ, ಉಪ್ಪಾರಪೇಟೆ, ಮಾರ್ಕೆಟ್, ಕಲಾಸಿಪಾಳ್ಯ, ಚಾಮರಾಜಪೇಟೆ, ಜೆಜೆ ಆರ್ ನಗರ, ಕಾಮಾಕ್ಷಿಪಾಳ್ಯ, ಕೆಪಿ ಅಗ್ರಹಾರ, ಕೆಂಗೇರಿ ಪೊಲೀಸ್ ಠಾಣೆಗಳು ಸೀಲ್ ಡೌನ್ ಆಗಿದ್ದವು. ಇದೀಗ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಸ್ಟೇಷನ್ ಸೀಲ್‍ಡೌನ್‍ಗೆ ಸಿದ್ಧವಾಗಿದೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕೊಲೆ ನಡೆದಿದ್ದು, ಈ ಪ್ರಕರಣ ಸಂಬಂಧ ಪೊಲೀಸರು 9 ಜನ ಕೊಲೆ ಆರೋಪಿಗಳನ್ನು ಬಂಧಿಸಿ ಸೆಲ್‍ನಲ್ಲಿ ಇಟ್ಟಿದ್ದರು. ಈ 9 ಜನರ ಪೈಕಿ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ ಮೂವರು ಆರೋಪಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲು ತೀರ್ಮಾನ ಮಾಡಿದ್ದು, ಸಂಪರ್ಕದಲ್ಲಿದ್ದ ಪೊಲೀಸರನ್ನು ಹೋಂಕ್ವಾರಂಟೈನ್ ಮಾಡಲಾಗಿದೆ.