ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನ ಹತೋಟಿಗೆ ತರಲು ರಾಜ್ಯವನ್ನ 10ರಿಂದ 24ರವರೆಗೆ ಲಾಕ್ ಡೌನ್ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಇನ್ನು ಲಾಕ್ ಡೌನ್ ಪರಿಣಾಮ ಮೇ 10 ರಿಂದ ಯಾವುದೇ ಚಿತ್ರ, ಧಾರಾವಾಹಿ ಸೇರಿ ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಥಗಿತಗೊಳ್ಳಲಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮೇ 10ರಿಂದ ರಾಜ್ಯ ಲಾಕ್‌ಡೌನ್ ಆಗುವ ಪರಿಣಾಮ ಸಿನಿಮಾ ಸೇರಿದಂತೆ ಎಲ್ಲ ರೀತಿಯ ಚಿತ್ರೀಕರಣಗಳನ್ನ ಸ್ಥಗಿತಗೊಳಿಸಲಾಗುತ್ತೆ. ರಿಯಾಲಿಟಿ ಶೋ ಬಿಗ್ ಬಾಸ್ʼನ ಶೂಟಿಂಗ್ ಕೂಡ ಸ್ಥಗಿತಗೊಳಲಾಗುವುದು ಎಂದು ಟಿವಿ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ತಿಳಿಸಿದ್ದಾರೆ.
ಅದ್ರಂತೆ, ಮೇ.10ರಿಂದ 24ರವರಗೆ ಆದಾಗ್ಲೇ ಶೂಟಿಂಗ್ ಮಾಡಿರುವ ಸಂಚಿಕೆಗಳನ್ನ ಪ್ರಸಾರ ಮಾಡಲಾಗುತ್ತೆ. ಲಾಕ್ ಡೌನ್ ಮುಗಿದ ಬಳಿಕ ಮತ್ತೆ ಶೂಟಿಂಗ್ ಪ್ರಕ್ರಿಯೆ ಶುರುವಾಗುತ್ತೆ. ಇದು ಬಿಗ್ ಬಾಸ್ ರಿಯಾಲಿಟಿ ಶೋಗೂ ಅನ್ವಯಿಸುತ್ತೆ ಎಂದರು.
ಕರ್ನಾಟಕದ ಯಾವುದೇ ಮೂಲೆಯಲ್ಲಿ (ರೆಸಾರ್ಟ್, ಪ್ರವಾಸಿ ತಾಣ, ಬೆಂಗಳೂರಿನ ಹೊರವಲಯಗಳಲ್ಲಿ) ಧಾರಾವಾಹಿಗಳ ಚಿತ್ರೀಕರಣ ಮಾಡಬಾರದೆಂದು ತೀರ್ಮಾನಿಸಲಾಗಿದೆ. ಒಂದ್ವೇಳೆ ಯಾರಾದರು ಕದ್ದು ಮುಚ್ಚಿ ಚಿತ್ರೀಕರಣ ಮಾಡುತ್ತಿರುವುದು ತಿಳಿದು ಬಂದಲ್ಲಿ, ಕೋವಿಡ್ ನಿಯಮ ಉಲ್ಲಂಘನೆ ಅಡಿಯಲ್ಲಿ, ಆ ಧಾರಾವಾಹಿಯ ತಂಡ ಮತ್ತು ವಾಹಿನಿಗಳು ಸರ್ಕಾರದ ಕೊವಿಡ್ ನಿಯಮಾವಳಿಗಳ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತೆ ಎಂದರು.