ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ತೀವ್ರತೆ ವೈದ್ಯಕೀಯ ವ್ಯವಸ್ಥೆಗೆ ಸವಾಲೊಡ್ಡಿದ್ದು ಸೋಂಕು ಹರಡದಂತೆ ತಡೆಗಟ್ಟುವುದಕ್ಕೆ ಸರ್ಕಾರ ಕಠಿಣ ನಿಯಮಾವಳಿಗಳ ಮೊರೆ ಹೋಗಿದೆ. ಆದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಕೊರೊನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಾಗಿದ್ದ ವ್ಯಕ್ತಿಯೇ ಬೇಜವಾಬ್ದಾರಿತನದಿಂದ ವರ್ತಿಸಿರುವ ಘಟನೆ ನಡೆದಿದೆ. ಜಿಲ್ಲೆಯ ಮುಧೋಳ ತಾಲ್ಲೂಕು ಆಸ್ಪತ್ರೆಯ ಮುಖ್ಯ ಫಾರ್ಮಾಸಿಸ್ಟ್ ನಂದಕುಮಾರ ಬೋನಗೇರಿ ಎಂಬುವವರು ಕೊರೊನಾ ಪಾಸಿಟಿವ್ ಇದ್ದರೂ ವಿಷಯ ಮುಚ್ಚಿಟ್ಟು ಕರ್ತವ್ಯಕ್ಕೆ ಹಾಜರಾಗಿ ಎಲ್ಲರನ್ನೂ ಅಪಾಯಕ್ಕೆ ಸಿಲುಕಿಸಿದ್ದಾರೆ. ಇದೀಗ ವಿಷಯ ಮೇಲಧಿಕಾರಿಗಳಿಗೆ ತಲುಪಿದ ನಂತರ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಅವರು ಫಾರ್ಮಾಸಿಸ್ಟ್ ನಂದಕುಮಾರ್ ಅವರನ್ನು ಅಮಾನತುಗೊಳಿಸಿದ್ದಾರೆ.
ಏಪ್ರಿಲ್ 21 ರಂದು ನಡೆಸಿದ ರ‍್ಯಾಪಿಡ್ ಟೆಸ್ಟ್ನಲ್ಲಿ ನಂದಕುಮಾರ ಬೋನಗೇರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿತ್ತು. ಆದರೆ, ವಿಷಯವನ್ನು ಯಾರಿಗೂ ಹೇಳದಂತೆ ಪರೀಕ್ಷೆ ನಡೆಸಿದ್ದ ಲ್ಯಾಬ್ ಟೆಕ್ನಿಷಿಯನ್ ಸಹಾಯಕ ಅಷ್ಪಾಕ್ ಗದಗ ಅವರಿಗೆ ಬೆದರಿಕೆ ಹಾಕುವ ಮೂಲಕ ಪಾಸಿಟಿವ್ ಬಂದಿರುವುದನ್ನು ಗುಟ್ಟು ಮಾಡಿದ್ದರು. ಅಲ್ಲದೇ ಪಾಸಿಟಿವ್ ಇರುವುದು ಖಚಿತವಾದ ನಂತರವೂ ಮಾಸ್ಕ್ ಧರಿಸದೆ ಆಸ್ಪತ್ರೆಯ ತುಂಬೆಲ್ಲಾ ಬೇಕಾಬಿಟ್ಟಿ ಓಡಾಡುತ್ತಿದ್ದ ವ್ಯಕ್ತಿ ಕರ್ತವ್ಯದಲ್ಲಿದ್ದ ವೈದ್ಯರು, ಸ್ಟಾಫ್ ನರ್ಸ್ ಸೇರಿದಂತೆ ಎಲ್ಲರೊಂದಿಗೆ ಒಡನಾಟವಿಟ್ಟುಕೊಂಡಿದ್ದರು. ಸಾಲದ್ದಕ್ಕೆ ಎರಡು ದಿನಗಳ ಹಿಂದೆಯಷ್ಟೇ ಬಾಗಲಕೋಟೆ ಔಷಧಾಲಯಕ್ಕೂ ಭೇಟಿಕೊಟ್ಟು ಔಷಧ ತೆಗೆದುಕೊಂಡು ಹೋಗಿದ್ದರು. ಇಷ್ಟೆಲ್ಲಾ ಆದ ಬಳಿಕ ಲ್ಯಾಬ್ ಟೆಕ್ನಿಷಿಯನ್ ಸಹಾಯಕ ಅಷ್ಪಾಕ್ ಗದಗ ಈ ಬಗ್ಗೆ ಬಾಯ್ಬಿಟ್ಟ ಕಾರಣ ವಿಚಾರ ಬಹಿರಂಗವಾಗಿದೆ.
ವಿಷಯ ತಿಳಿದ ತಕ್ಷಣವೇ ಮುಧೋಳ ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮಲಘಾಣ್ ಫಾರ್ಮಾಸಿಸ್ಟ್ ವರ್ತನೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಕ್ರಮ ಕೈಗೊಂಡ ಜಿಲ್ಲಾಧಿಕಾರಿ ನಿರ್ಲಕ್ಷತನ ಪ್ರದರ್ಶಿಸಿದ ನಂದಕುಮಾರ ಬೋನಗೇರಿಯನ್ನು ಅಮಾನತು ಮಾಡಿದ್ದಾರೆ. ಜತೆಗೆ, ತಕ್ಷಣ ವಿಷಯ ಬಹಿರಂಗಪಡಿಸದ ಕಾರಣಕ್ಕೆ ಗುತ್ತಿಗೆ ಆಧಾರದ ಲ್ಯಾಬ್ ಟೆಕ್ನಿಷಿಯನ್ ಸಹಾಯಕ ಅಷ್ಪಾಕ್ ಗದಗ ಅವರನ್ನು ಲ್ಯಾಬ್‌ನಿಂದ ಬಿಡುಗಡೆಗೊಳಿಸಿ ಬೇರೆ ವಿಭಾಗಕ್ಕೆ ಕಳುಹಿಸಿದ್ದಾರೆ. ಸದ್ಯ ಇಷ್ಟೆಲ್ಲಾ ಅವಾಂತರಕ್ಕೆ ಕಾರಣನಾದ ನಂದಕುಮಾರ್ ಪಾಸಿಟಿವ್ ಬಂದ ನಂತರ ತಾಲ್ಲೂಕು ಆಸ್ಪತ್ರೆಯ ವೈದ್ಯರು, ನರ್ಸ್ ಸೇರಿದಂತೆ ಸುಮಾರು ೧೫೦ ಜನ ಸಿಬ್ಬಂದಿ ಜತೆ ಸಂಪರ್ಕ ಹೊಂದಿದ್ದರು ಎಂದು ಬಾಗಲಕೋಟೆ ಡಿಹೆಚ್‌ಓ ಅನಂತ ದೇಸಾಯಿ ತಿಳಿಸಿದ್ದಾರೆ.