ಬೆಂಗಳೂರು,ಜು.27-ಬೆಳಗಾವಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಆ್ಯಂಬುಲೆನ್ಸ್ ಸುಟ್ಟು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಯತ್ನ ನಡೆಸಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ 22 ಆರೋಪಿಗಳಲ್ಲಿ 9 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಜು.22ರಂದು ಇಲ್ಲಿನ ಬಿಮ್ಸ್ ಆಸ್ಪತ್ರೆ ಮುಂಭಾಗ ಆ್ಯಂಬುಲೆನ್ಸ್‍ಗೆ ದುಷ್ಕರ್ಮಿಗಳು ಬೆಂಕಿ ಇಟ್ಟು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಯತ್ನ ನಡೆಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ 22 ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ 9 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕಿತ್ಸೆ ವಿಳಂಬದ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್‍ಗೆ ಬೆಂಕಿ ಇಟ್ಟು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಯತ್ನ ನಡೆಸಿದ್ದರು. ಈ ಘಟನೆ ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆಯನ್ನು ಖಂಡಿಸಿ ಬಿಮನ್ಸ್ ಆಸ್ಪತ್ರೆಯ ಸಿಬ್ಬಂದಿಗಳು ಕೂಡ ಪ್ರತಿಭಟನೆ ನಡೆಸಿದ್ದರು. ಈ ರೀತಿ ಆ್ಯಂಬುಲೆನ್ಸ್ ಸುಟ್ಟು ವೈದ್ಯರ ಮೇಲೆ ಹಲ್ಲೆಗೆ ಮುಂದಾದರೆ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಿಲ್ಲ.
ನಮಗೆ ರಕ್ಷಣೆ ನೀಡಬೇಕೆಂದು ಇಲ್ಲಿನ ವೈದ್ಯರು, ನರ್ಸ್‍ಗಳು ಆಗ್ರಹಿಸಿದ್ದರು.
ರಾಜ್ಯಾದ್ಯಂತ ಈ ಘಟನೆ ಸೇರಿದಂತೆ ಹಲವು ವೈದ್ಯರ ಮೇಲೆ ನಡೆದ ಘಟನೆಯನ್ನು ಖಂಡಿಸಿ ವೈದ್ಯರು ಪ್ರತಿಭಟನೆ ಕೂಡ ನಡೆಸಿದ್ದರು.