ಬೆಳಗಾವಿ : ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಪ ಚುನಾವಣೆ ಕುರಿತು ಮತ ಎಣಿಕೆ ಕಾರ್ಯ ಮೇ ೦೨ ರಂದು ಮುಂಜಾನೆ ೮ ಗಂಟೆಯಿಂದ ಬೆಳಗಾವಿಯ ರಾಣಿ ಪಾರ್ವತಿ ದೇವಿ ಮಹಾವಿದ್ಯಾಲಯದಲ್ಲಿ ನಡೆಯಲಿದ್ದು, ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಕೋವಿಡ್-೧೯ ನೆಗೆಟಿವ್ ವರದಿ ಕಡ್ಡಾಯ ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ಎಸ್. ತಿಳಿಸಿದ್ದಾರೆ.
ಮತ ಎಣಿಕೆ ದಿನದಂದು ಅಭ್ಯರ್ಥಿಗಳು/ ಅಧಿಕಾರಿಗಳು/ಸಿಬ್ಬಂದಿಗಳು ಹಾಗೂ ಮತ ಎಣಿಕೆ ಸಿಬ್ಬಂದಿ/ಮತ ಎಣಿಕೆ ಎಜೆಂಟರುಗಳಿಗೆ ಕೋವಿಡ್-೧೯ ನೆಗೆಟಿವ್ ವರದಿ ಕಡ್ಡಾಯವಾಗಿರುತ್ತದೆ. ಕೋವಿಡ್-೧೯ ನೆಗೆಟಿವ್ ವರದಿ ಇದ್ದಂತಹ ವ್ಯಕ್ತಿಗಳಿಗೆ ಮಾತ್ರ ಮತ ಎಣಿಕೆ ಕೇಂದ್ರದಲ್ಲಿ ಪ್ರವೇಶವಿರುತ್ತದೆ. ಕಾರಣ ಎಲ್ಲರೂ ಕಡ್ಡಾಯವಾಗಿ ಕೋವಿಡ್-೧೯ ವರದಿಯನ್ನು ತಮ್ಮೊಂದಿಗೆ ತರಬೇಕು.
ರಾಜ್ಯ ಸರಕಾರವು ಏ.೨೭ ರಿಂದ ಮೇ ೧೦ರ ವರೆಗೆ ಜನತಾ ಕರ್ಫ್ಯೂ ಜಾರಿ ಮಾಡಿರುವುದರಿಂದ ಪೊಲೀಸ್ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ಮತ ಎಣಿಕೆ ದಿನವಾದ ಮೇ ೦೨ ರಂದು ಮತ ಎಣಿಕೆ ಎಜೆಂಟರುಗಳಿಗೆ ಈ ಕಾರ್ಯಾಲಯದಿಂದ ವಾಹನ ಗುರುತಿನ ಚೀಟಿಯನ್ನು ನೀಡಲಾಗುವುದು.
ಪಾಸ್ ಹೊಂದಿದ ಮತ ಎಣಿಕೆ ಸಿಬ್ಬಂದಿಗಳು ಹಾಗೂ ಮತ ಎಣಿಕೆಯ ಕುರಿತು ಇನ್ನಿತರ ಕಾರ್ಯಗಳಿಗೆ ನಿಯೋಜಿತ ಸಿಬ್ಬಂದಿಗಳು ತಮ್ಮ ಗುರುತಿನ ಚೀಟಿ ತೋರಿಸಿದ್ದಲ್ಲಿ ಅವರಿಗೆ ಹಾಗೂ ಅವರ ವಾಹನಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಪ್ರವೇಶಿಸುವ ಅವಕಾಶ ಕಲ್ಪಿಸಲಾಗಿದೆ. ನಿಗದಿತ ಪ್ರದೇಶದಲ್ಲಿ ವಾಹನ ನಿಲುಗಡೆಯ ಕುರಿತು ಕ್ರಮ ವಹಿಸಲಾಗುವುದು.
ಒಟ್ಟಾರೆ ಕೋವಿಡ್-೧೯ ಮಾರ್ಗಸೂಚಿಯನ್ವಯ ಎಲ್ಲಾ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಮತ ಎಣಿಕೆ ಕಾರ್ಯವನ್ನು ಸುವ್ಯವಸ್ಥಿತವಾಗಿ ಹಾಗೂ ಯಶಸ್ವಿಯಾಗಿ ಜರುಗಿಸಲು ಎಲ್ಲರೂ ಸಹಕಾರ ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.