ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ಬಿಜೆಪಿಯ ಒಂದು ವರ್ಗದಲ್ಲೇ ಅಸಮಾಧಾನ ಇರಬೇಕಾದರೆ ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಇರದೇ ಇರಲು ಸಾಧ್ಯವೇ?
ಆದರೆ, ಯಾವುದೇ ಆರೋಪ ಅಥವಾ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳದ ವಿಜಯೇಂದ್ರ ಅವರು ಪಕ್ಷ ತಮಗೆ ವಹಿಸಿದ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಕಳೆದ ಶಿರಾ ಅಸೆಂಬ್ಲಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಿದ ನಂತರ ಇವರನ್ನು ಬೈಎಲೆಕ್ಷನ್ ಸ್ಪೆಷ್ಟಲಿಸ್ಟ್ ಎಂದೇ ಪಕ್ಷದಲ್ಲಿ ಕರೆಯಲಾಗುತ್ತಿದೆ.
ಮಸ್ಕಿ ಉಪ ಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಂಡಿರುವ ವಿಜಯೇಂದ್ರ ಅವರು ಶಾಸಕ ಪ್ರೀತಂ ಗೌಡ ಸೇರಿದಂತೆ ಅದೇ ಹಳೆಯ ತಂಡವನ್ನು ಕಟ್ಟಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಶಿರಾ ತಂತ್ರವನ್ನೇ ಮಸ್ಕಿಯಲ್ಲೂ ಬಳಸಿಕೊಳ್ಳುತ್ತಿದ್ದಾರೆ.
ಸ್ವಪಕ್ಷೀಯರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ವಿಜಯೇಂದ್ರ ಬಗ್ಗೆ ಗಂಭೀರ ಆರೋಪವನ್ನು ಮಾಡಿದ್ದಾರೆ. ಇವರಿಬ್ಬರದ್ದೂ ಆರೋಪ ಒಂದೇ. ಹಾಗಾದರೆ, ಇದರಲ್ಲಿ ಸತ್ಯ ಯಾವುದು, ಸುಳ್ಳು ಯಾವುದು?
“ಮಸ್ಕಿ ಕ್ಷೇತ್ರದ ಜವಾಬ್ದಾರಿಯನ್ನು ವಿಜಯೇಂದ್ರಗೆ ವಹಿಸಿದ್ದಾರೆ, ಆತ ಗೋಣಿ ಚೀಲದಲ್ಲಿ ಹಣ ತುಂಬಿಕೊಂಡು ಇಲ್ಲಿಗೆ ಬಂದಿದ್ದಾರೆ. ನಲವತ್ತರಿಂದ ಐವತ್ತು ಕೋಟಿ ಖರ್ಚು ಮಾಡಿಯಾದರೂ ಈ ಚುನಾವಣೆಯನ್ನು ಗೆಲ್ಲಬೇಕು ಎನ್ನುವುದು ಅವರ ಉದ್ದೇಶ. ಉಪ ಚುನಾವಣೆಯಲ್ಲಿ ದುಡ್ಡು ಕೊಟ್ಟು ಗೆಲ್ಲಲು ನೀನೇ ಆಗಬೇಕಾಗಿಲ್ಲ”ಎಂದು ಸಿದ್ದರಾಮಯ್ಯನವರು ವಿಜಯೇಂದ್ರ ವಿರುದ್ದ ಕಿಡಿಕಾರಿದ್ದರು.
ದುಡ್ಡು ಕೊಟ್ಟು ಗೆಲ್ಲಿಸಿದರೆ, ಬೈಎಲೆಕ್ಷನ್ ಸ್ಪೆಷ್ಟಲಿಸ್ಟ್ ಆಗುವುದಿಲ್ಲ
“ಅಸೆಂಬ್ಲಿ ವಿಸರ್ಜಿಸು, ಮತ್ತೆ ಚುನಾವಣೆಗೆ ಹೋಗೋಣ. ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತೆ ಎನ್ನುವ ಮಾತನ್ನು ಯಡಿಯೂರಪ್ಪನವರಿಗೆ ಅಸೆಂಬ್ಲಿಯಲ್ಲಿ ಸವಾಲು ಹಾಕಿದ್ದೆ. ನನ್ನ ಸವಾಲಿಗೆ ಯಡಿಯೂರಪ್ಪನವರು ತುಟಿಕ್ ಪಿಟಿಕ್ ಅನ್ನಲಿಲ್ಲ. ಶಿರಾದಲ್ಲಿ ಮಾಡಿದ್ದೂ ಅದೇ, ದುಡ್ಡು ಕೊಟ್ಟು ಗೆಲ್ಲಿಸಿದ ಕೂಡಲೇ, ಬೈಎಲೆಕ್ಷನ್ ಸ್ಪೆಷ್ಟಲಿಸ್ಟ್ ಆಗುವುದಿಲ್ಲ”ಎಂದು ಸಿದ್ದರಾಮಯ್ಯ ವ್ಯಂಗ್ಯ ವಾಡಿದ್ದರು.
ದುಡ್ಡು ಹಂಚಿ ಗೆಲ್ಲೋದು ಏನು ದೊಡ್ಡ ವಿಚಾರವಲ್ಲ
“ಮಂತ್ರಿಗಳೆಲ್ಲಾ ವಿಜಯೇಂದ್ರನ ಮುಂದೆ ಕೈಕಟ್ಟಿ ನಿಂತುಕೊಳ್ಳಬೇಕು. ವಿಜಯೇಂದ್ರನಿಗೆ ಸರ್ ಅನ್ನಬೇಕು, ಅವನಿನ್ನೂ ಹುಡುಗ. ಉಪ ಚುನಾವಣೆಯಲ್ಲಿ ಯೋಗ್ಯತೆ ಇಲ್ಲದೇ ಇರುವವರಿಗೆ ಉಸ್ತುವಾರಿಯನ್ನು ನೀಡಿದ್ದಾರೆ. ದುಡ್ಡು ಹಂಚಿ ಗೆಲ್ಲೋದು ಏನು ದೊಡ್ಡ ವಿಚಾರವಲ್ಲ, ಮಸ್ಕಿಯಲ್ಲಿ ಅದನ್ನೇ ಮಾಡುತ್ತಿದ್ದಾರೆ”ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ವಿರುದ್ದ ಕಿಡಿಕಾರಿದ್ದರು.
ಸಿದ್ದರಾಮಯ್ಯ, ಯತ್ನಾಳ್ ಇಬ್ಬರೂ ವಿಜಯೇಂದ್ರ ವಿರುದ್ದ ಒಂದೇ ರೀತಿಯ ಆರೋಪ
ಹೀಗೆ, ಸಿದ್ದರಾಮಯ್ಯ ಮತ್ತು ಯತ್ನಾಳ್ ಇಬ್ಬರೂ ವಿಜಯೇಂದ್ರ ವಿರುದ್ದ ಒಂದೇ ರೀತಿಯ ಆರೋಪವನ್ನು ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯೇಂದ್ರ, “ಯಾರಿಗೆ ಯೋಗ್ಯತೆ ಇದೆ ಅವರಿಗೆ ರಾಜ್ಯಾಧ್ಯಕ್ಷರು ಉಸ್ತುವಾರಿಯನ್ನು ನೀಡಿದ್ದಾರೆ. ನನಗೆ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತೇನೆ. ದುಡ್ಡು ಹಂಚಿಕೆ ಆರೋಪವೆಲ್ಲಾ ಸತ್ಯಕ್ಕೆ ದೂರವಾದದ್ದು”ಎಂದು ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದರು.