ಹುಬ್ಬಳ್ಳಿ, ಏ.2- ದೇಶದಲ್ಲಿ ಕೊರೊನಾ ಸೋಂಕಿನ ಆರ್ಭಟ ಮತ್ತು ಆರ್ಥಿಕ ಹಿಂಜರಿತದ ಪರಿಣಾಮದ ಹೊರತಾಗಿಯೂ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗ ಸರಕು ಸಾಗಣೆ ಮೂಲಕ ಉತ್ತಮ ಆದಾಯ ಗಳಿಸಿದೆ. ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ಸುಮಾರು 3.45 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಹೊಸ ದಾಖಲೆ ಮಾಡಿದ್ದು, ಇದು ಕಳೆದ 4 ವರ್ಷಗಳಲ್ಲಿ ಗರಿಷ್ಠ ಮಾಸಿಕ ಸರಕು ಸಾಗಣೆ ಆಗಿದೆ. ಮಾರ್ಚ್ 31 ರಂದು 2286 ವ್ಯಾಗನ್ ಸರಕು ಸಾಗಣೆ ಮಾಡಿದ್ದು, ಇದು ಹುಬ್ಬಳ್ಳಿ ವಿಭಾಗದ ಒಂದೇ ದಿನದಲ್ಲಿ ಅತಿ ಹೆಚ್ಚು ಸರಕು ಸಾಗಣೆ ಮಾಡಿದ ದಾಖಲೆಯಾಗಿದೆ.
ಹುಬ್ಬಳ್ಳಿ ವಿಭಾಗವು 2020-21ರ ಆರ್ಥಿಕ ವರ್ಷದಲ್ಲಿ 29.949 ಮಿಲಿಯನ್ ಟನ್‍ಗಳಷ್ಟು ಸರಕು-ಸಾಗಣೆ ಮಾಡಿದ್ದು, ಇದು ಕಳೆದ ವರ್ಷ 27.3 ಮಿಲಿಯನ್ ಟನ್ ಸರಕು ಸಾಗಣೆ ಮಾಡುವುದಕ್ಕಿಂತ 9.3% ಹೆಚ್ಚಾಗಿದೆ. 2021ರ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ ವಿಭಾಗದ ಸರಕು ಆದಾಯ ಸುಮಾರು 2680 ಕೋಟಿ ರೂ ಆಗಿದ್ದು, ಇದು ಕಳೆದ ವರ್ಷಕ್ಕಿಂತ 2.3% ಹೆಚ್ಚಾಗಿದೆ.
ಮೊದಲ ಬಾರಿಗೆ ಫೆಬ್ರವರಿ ತಿಂಗಳಲ್ಲಿ 1326 ಟನ್ ಅಕ್ಕಿಯನ್ನು ಗಂಗಾವತಿಯಿಂದ ಗುವಾಹಟಿ ಬಳಿಯ ಅಜಾರಾಗೆ ಲೋಡ್ ಮಾಡಲಾಗಿದ್ದು, ಗಂಗಾವತಿಯನ್ನು ರೈಲ್ವೆ ನಕ್ಷೆಯಲ್ಲಿ ಹೊಸ ಸರಕು ಸಾಗಣೆಯ ಕೇಂದ್ರವನ್ನಾಗಿ ಮಾಡಲಾಗಿದೆ. ಕಬ್ಬಿಣದ ಅದಿರು, ರಸಗೊಬ್ಬರ, ಮೆಕ್ಕೆಜೋಳ ಮತ್ತು ಉಕ್ಕಿನಂತಹ ಸರಕುಗಳಲ್ಲಿ ಹುಬ್ಬಳ್ಳಿ ವಿಭಾಗದ ಸಾಗಣೆ ಗಮನಾರ್ಹ ಸುಧಾರಣೆ ಕಂಡಿದ್ದು, ಆರ್ಥಿಕ ವರ್ಷದಲ್ಲಿ ಸಾಗಣೆ ಮಾಡಲಾದ ಕಬ್ಬಿಣದ ಅದಿರು 7.42 ಮಿಲಿಯನ್ ಟನ್ ಆಗಿದ್ದು, ಇದು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 16.95% ಹೆಚ್ಚಾಗಿದೆ.
ಬಾಗಲಕೋಟೆಯಿಂದ 2477 ಟನ್ ಮೆಕ್ಕೆ ಜೋಳ ಮತ್ತು 2484 ಟನ್ ಮೆಕ್ಕೆ ಜೋಳವನ್ನು ವಿಜಯಪುರದಿಂದ ಬಾಂಗ್ಲಾದೇಶಕ್ಕೆ ರಫ್ತು ಮಾಡಲಾಗಿದೆ. ಹುಬ್ಬಳ್ಳಿ ವಿಭಾಗವು ತನ್ನ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡಲು ಬದ್ಧವಗಿದ್ದು, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್ ಮಲ್ಖೆಡೆ ಅವರ ಮಾರ್ಗದರ್ಶನದಲ್ಲಿ ವ್ಯಾಪಾರ ಅಭಿವೃದ್ಧಿ ಘಟಕವು ಹೊಸ ಸುಧಾರಣೆ ಮೂಲಕ ಮತ್ತು ಕೋವಿಡ್-19ರ ಸವಾಲುಗಳ ನಡುವೆಯೂ ಸರಕುಗಳ-ಸಾಗಣೆಯಲ್ಲಿ ದಾಖಲೆ ಮಾಡಿದೆ.