Breaking News

1200 ಕೋಟಿ ರೂ.ಗಳ ಹಗರಣ : ಯಡಿಯೂರಪ್ಪ ರಾಜೀನಾಮೆಗೆ ಡಿಕೆಶಿ ಆಗ್ರಹ

Spread the love

ಬೆಂಗಳೂರು, ಏ.1- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅವರ ಸಂಪುಟದಲ್ಲೇ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಅವರು 1200 ಕೋಟಿ ರೂ.ಗಳ ಹಗರಣದ ಆರೋಪ ಮಾಡಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,

ರಾಜ್ಯದ ಇತಿಹಾಸದಲ್ಲೇ ಸಂಪುಟದ ಸಚಿವರೊಬ್ಬರು ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿ ಗಂಭೀರ ಆರೋಪ ಮಾಡಿದ್ದಾರೆ. 1200 ಕೋಟಿ ರೂ.ಗಳ ಹಗರಣ ಪ್ರಸ್ತಾಪಿಸಿದ್ದಾರೆ. ಈ ವಿಚಾರದಲ್ಲಿ ತಿಪ್ಪೆ ಸಾರಿಸುವುದನ್ನು ಬಿಟ್ಟು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲ ದೂರು ನೀಡಿದ ಈಶ್ವರಪ್ಪ ಅವರ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರದ ಒಳಗೆ ಇನ್ನೂ ಏನೇನು ಇದೆಯೋ ಗೊತ್ತಿಲ್ಲ. ಒಂದೊಂದಾಗಿ ಹೊರ ಬರುತ್ತಿವೆ. ಈಶ್ವರಪ್ಪ ಅವರು ಪತ್ರ ಬರೆದಿರುವುದು ತಪ್ಪು ಎಂದು ನಾನು ಹೇಳುವುದಿಲ್ಲ. ಅವರ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಈ ಮೂಲಕ ಇದು 30 ಪರ್ಸೆಂಟ್ ಸರ್ಕಾರ ಎಂದು ಬಹಿರಂಗವಾಗಿದೆ ಎಂದರು. ಕಾಂಗ್ರೆಸ್ ಈಶ್ವರಪ್ಪ ಅವರ ಪತ್ರದ ವಿಚಾರವಾಗಿ ಹೋರಾಟ ನಡೆಸಲಿದೆ. ನಾವು ಈ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿರುವ ಆರೋಪಗಳಿಗೆ ಈಶ್ವರಪ್ಪ ಅವರ ಪತ್ರ ಸಾಕ್ಷ್ಯ ನೀಡಿದಂತಾಗಿದೆ ಎಂದು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಅವರ ಸಿಡಿ ವಿಚಾರ ನನಗೆ ಸಂಬಂಧಪಡದ ವಿಷಯ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ನನ್ನ ಹೆಸರು ಹೇಳಿದರೆ ಅವರಿಗೆ ಒಂದಿಷ್ಟು ಮಾರ್ಕೆಟಿಂಗ್ ಆಗುತ್ತದೆ. ಅದಕ್ಕೆ ಪದೇ ಪದೆ ನನ್ನ ಹೆಸರು ಪ್ರಸ್ತಾಪಿಸುತ್ತಾರೆ. ಅಸಂಬಂಧ ವಿಚಾರಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ಟ್ವಿಟ್: ಎತ್ತು ಏರೋಪ್ಲೇನ್‍ಗೆ ಕೋಣ ವಾಟರ್‍ಬೋಟಿಗೆ ಎಂಬಂತಹ ಪರಿಸ್ಥಿತಿ ರಾಜ್ಯ ಬಿಜೆಪಿಯಲ್ಲಿ ನಿರ್ಮಾಣವಾಗಿದ್ದು, ರಾಜ್ಯ ಕೆಸರುಗುಂಡಿಯಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ನೀಡಿರುವ ದೂರನ್ನು ಉಲ್ಲೇಖಿಸಿ ಟ್ವಿಟ್ ಮಾಡಿರುವ ಕಾಂಗ್ರೆಸ್, ಎತ್ತು ಏರಿಗೆ ಕೋಣ ನೀರಿಗೆ ಎಂಬ ಗಾದೆಯನ್ನು ಆಧುನಿಕತೆಗೆ ತಕ್ಕಂತೆ ಮಾರ್ಪಾಡು ಮಾಡಿದೆ. ಎತ್ತು ಏರೋಪ್ಲೇನ್‍ಗೆ ಕೋಣ ವಾಟರ್‍ಬೋಟಿಗೆ ಎಂದು ಲೇವಡಿ ಮಾಡುವ ಮೂಲಕ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.


Spread the love

About Laxminews 24x7

Check Also

ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ ಅವಳಿನಗರದಲ್ಲಿನ 400 ಡ್ರಗ್ ಪೆಡ್ಲರ್ಸ್ ಹಾಗೂ ಸೇವನೆ ಮಾಡುವವರ ಪರೇಡ್

Spread the love ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ