ಬೆಳಗಾವಿ: ಬಿಮ್ಸ್ ಆಸ್ಪತ್ರೆಯ ಆ್ಯಂಬುಲೆನ್ಸ್ ಸುಟ್ಟವರು ದೇಶದ್ರೋಹಿಗಳು ಅಂತಾ ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿಕೆ ನೀಡಿದ್ದಾರೆ.
ಆ್ಯಂಬುಲೆಸ್ ಗೆಬೆಂಕಿ ಹಚ್ಚಿದ ವಿಚಾರವಾಗಿ ನಗರದ ಕಾಡಾ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಇದರ ಹಿಂದಿರುವವರನ್ನು ಪೊಲೀಸರು ಕಂಡು ಹಿಡಿಯಬೇಕು.
ವೈದ್ಯಕೀಯ ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಸೂಕ್ತ ಬಂದೋಬಸ್ತ್ ಒದಗಿಸಲಾಗುವುದು . ಕೃತ್ಯ ಎಸಗಿದವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ ಸಚಿವ, ದೇಶದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಅಧಿಪತಿಯಾಗಿದೆ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬಿಎಸ್ ವೈ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನವರಿಗೆ ಬಿಜೆಪಿ ವಿರುದ್ದ ಟೀಕೆ ಮಾಡಲು ಯಾವುದೇ ಅವಕಾಶವಿಲ್ಲ ಹೀಗಾಗಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದೆ.
ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ಹಿರಿಯ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಶೋಭ ತರುವಂತದಲ್ಲ. ದೇಶದಲ್ಲಿ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ವಿರುದ್ದ ಎಲ್ಲರೂ ಸೇರಿ ಹೋರಾಟ ನಡೆಸಬೇಕಿದೆ. ಎಲ್ಲ ಪಕ್ಷದವರು ಪಕ್ಷಭೇದ ಮರೆತು ಜನರ ಆರೋಗ್ಯದ ಕಡೆ ಗಮನ ನೀಡಬೇಕಿದೆ ಎಂದರು.
ಕಳೆದ ಎರಡು ದಿನಗಳ ಹಿಂದೆ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಕುಟುಂಬಸ್ಥರು ಆ್ಯಂಬುಲೆನ್ಸ್ ಗೆ ಬೆಂಕಿ ಹಚ್ಚಿ, ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ಪ್ರಕರಣದಡಿ ಈಗಾಗಲೇ ಪೊಲೀಸರು 14 ಜನರನ್ನು ಬಂಧಿಸಿದ್ದಾರೆ.
Laxmi News 24×7