Breaking News

ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಧಾರ್ಮಿಕ ಕಟ್ಟಡ ಕಟ್ಟಲು ಯಾವ ಧರ್ಮ ಹೇಳುತ್ತದೆ? : ಹೈಕೋರ್ಟ್‌

Spread the love

ಬೆಂಗಳೂರು: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಧಾರ್ಮಿಕ ಕಟ್ಟಡ ನಿರ್ಮಿಸಿ ಎಂದು ಯಾವ ಧರ್ಮ ಹೇಳುತ್ತದೆ ಎಂದು ಪ್ರಶ್ನಿಸಿರುವ ಹೈಕೋರ್ಟ್‌, ದೇವರು-ಧರ್ಮದ ಹೆಸರಲ್ಲಿ ಸಾರ್ವಜನಿಕ ಆಸ್ತಿ ದುರ್ಬಳಕೆ ಮಾಡಿಕೊಳ್ಳುವುದನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಕೋಲಾರದ ಚನ್ನಸಂದ್ರ ಹಾಗೂ ಮಂಗಸಂದ್ರ ಗ್ರಾಮಗಳಲ್ಲಿನ ಸರ್ಕಾರಿ ಗೋಮಾಳಗಳ ಜಮೀನಿನಲ್ಲಿ ಅನಧಿಕೃತವಾಗಿ ದೇವಸ್ಥಾನ, ಚರ್ಚ್‌ ಹಾಗೂ ಮಿನಾರ್‌ ನಿರ್ಮಾಣ ಮಾಡಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಕೋರಿ ಸ್ಥಳೀಯ ನಿವಾಸಿ ಸಿದ್ದನಹಳ್ಳಿಯ ಕಿಶೋರ್‌ ರಾಮಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ರೀತಿ ಹೇಳಿತು.

ವಿಚಾರಣೆ ವೇಳೆ ಧಾರ್ಮಿಕ ಕಟ್ಟಡಗಳ ಪರ ವಕೀಲರು ಸಲ್ಲಿಸಿದ್ದ ಆಕ್ಷೇಪಣೆಯನ್ನು ಗಮನಿಸಿದ ನ್ಯಾಯಪೀಠ, ಅವರ ಸಮರ್ಥನೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಹೊಸದಾಗಿ ದೇವಸ್ಥಾನ ನಿರ್ಮಿಸಿಲ್ಲ. 8 ವರ್ಷಗಳ ಹಿಂದೆ ದೇವಸ್ಥಾನ ನಿರ್ಮಿಸಿದ್ದೇವೆ. ಪ್ರಸ್ತುತ ಜಾಗವನ್ನು ದೇವಸ್ಥಾನಕ್ಕೆ ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದೀರಿ, ಅದ್ಹೇಗೆ, ಸರ್ಕಾರಿ ಜಮೀನಿನಲ್ಲಿ ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸುತ್ತೀರಿ. ಮೊದಲು ಅವುಗಳನ್ನು ತೆರವು ಮಾಡಿ, ಆಮೇಲೆ ನಿಮ್ಮ ಮನವಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ನಿರ್ದೇಶನ ನೀಡಲಾಗುವುದು ಎಂದು ಹೇಳಿತು.

ಅಲ್ಲದೇ, ಗೋಮಾಳ, ಸರ್ಕಾರಿ ಜಾಗದಲ್ಲಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿ ಎಂದು ಯಾವ ಧರ್ಮ ಹೇಳುತ್ತದೆ. ದೇವರು, ಧರ್ಮದ ಹೆಸರಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುವುದು ಎಷ್ಟು ಸರಿ. ಸುಪ್ರೀಂ ಕೋರ್ಟ್‌ 11 ವರ್ಷಗಳ ಹಿಂದೆಯೇ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಲು ಆದೇಶಿಸಿದೆ. ಹಾಗಿದ್ದೂ, 8 ವರ್ಷಗಳ ಹಿಂದೆ ದೇವಸ್ಥಾನ ನಿರ್ಮಿಸಿದ್ದೇವೆಂದು ಸಮರ್ಥನೆ ಕೊಡುತ್ತಿದ್ದೀರಿ. ಸುಪ್ರೀಂ ತೀರ್ಪಿನ ಹೊರತಾಗಿಯೂ ನೀವು ಯಾವ ಕಾನೂನಿನ ಆಧಾರದಲ್ಲಿ ಧಾರ್ಮಿಕ ಕಟ್ಟಡ ನಿರ್ಮಿಸಿದ್ದೀರಿ ಎಂಬುದಕ್ಕೆ ಸ್ಪಷ್ಟನೆ ನೀಡಿ ಎಂದು ಧಾರ್ಮಿಕ ಕಟ್ಟವೊಂದರ ಪರ ವಕೀಲರಿಗೆ ಹೇಳಿತು. ಅಲ್ಲದೇ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಒಂದೇ ಧರ್ಮವನ್ನು ಗುರಿ ಮಾಡುವುದನ್ನೂ ನ್ಯಾಯಾಲಯ ಸಹಿಸಿಕೊಳ್ಳುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ ಎಚ್ಚರಿಕೆ ನೀಡಿತು.

ದೇವಸ್ಥಾನ ಇರುವ ಜಾಗ ಸರ್ಕಾರಿ ಗೋಮಾಳ ಎಂದು ಹೇಳಲಾಗಿದ್ದು, ಅದನ್ನು ತೆರವು ಮಾಡುವ ಸಂಬಂಧ ಕ್ರಮ ಕೈಗೊಳ್ಳಿ. ಹಾಗೆಯೇ ಅರ್ಜಿದಾರರು ಆರೋಪಿಸಿರುವಂತೆ ದೇವಸ್ಥಾನ, ಚರ್ಚ್‌ ಹಾಗೂ ಮಿನಾರ್‌ ಇರುವ ಜಾಗವು ಗೋಮಾಳದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ವೆ ನಡೆಸಿ, ಆ ಕುರಿತ ವರದಿಯನ್ನು ಸಲ್ಲಿಸಿ ಎಂದು ಕೋಲಾರ ತಹಶೀಲ್ದಾರ್‌ಗೆ ನಿರ್ದೇಶನ ನೀಡಿ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

ಕೋಲಾರದ ಚನ್ನಸಂದ್ರ ಗ್ರಾಮದ ಸರ್ವೆ ನಂಬರ್‌ 49ರ ಜಮೀನು ಸರ್ಕಾರಿ ಗೋಮಾಳವಾಗಿದ್ದು, ಇಲ್ಲಿ ದೇವಸ್ಥಾನ, ಚರ್ಚ್‌ ಹಾಗೂ ಮಿನಾರ್‌ ನಿರ್ಮಿಸಲಾಗಿದೆ. ಅದೇ ರೀತಿ ಮಂಗಸಂದ್ರ ಗ್ರಾಮದ ಸರ್ವೆ ನಂಬರ್‌ 94 ರಲ್ಲಿನ ಗೋಮಾಳದಲ್ಲಿ ಚರ್ಚ್‌ ನಿರ್ಮಿಸಲಾಗಿದೆ. ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಈ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಬೇಕು. ಗೋಮಾಳಕ್ಕೆಂದೇ ಮೀಸಲಿರಿಸಿರುವ ಜಾಗವನ್ನು ರಕ್ಷಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ