ಬೆಂಗಳೂರು: ‘ಮೈತ್ರಿ ಸರ್ಕಾರವನ್ನು ಬೀಳಿಸಿ ಹೋದವರ ಮೇಲೆ ಮತ್ತು ಪಕ್ಷ ದ್ರೋಹ ಮಾಡಿದವರ ಮೇಲೆ ಅನುಕಂಪ ಬರಲು ಸಾಧ್ಯವಾ?’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ರಮೇಶ್ ಜಾರಕಿಹೊಳಿ ವಿರುದ್ಧದ ಸಿ.ಡಿ ಪ್ರಕರಣ ಬಹಿರಂಗವಾದ ಬೆನ್ನಲ್ಲೇ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳನ್ನು ನಿರ್ಬಂಧಿಸಬೇಕೆಂದು ಕೋರಿ ಆರು ಸಚಿವರು ಕೋರ್ಟ್ ಮೊರೆ ಹೋಗಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ‘ಕೋರ್ಟ್ ಮೆಟ್ಟಿಲು ಹತ್ತುತ್ತಿದ್ದಾರೆ ಎಂದರೆ ಅವರಿಗೆ ತಮ್ಮ ವಿರುದ್ಧ ಸಿ.ಡಿ ಇದೆ ಎಂಬುದು ಗೊತ್ತಿರಬೇಕಲ್ಲ?’ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಸರಿಯಾಗಿ ಮಾಹಿತಿ ಪಡೆದು ಬಳಿಕ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
‘ಜನರು ಹೇಸಿಗೆ ಪಡುವಂಥ ಸ್ಥಿತಿಗೆ ರಾಜಕಾರಣ ಬಂದಿದೆ. ಯಾರೋ ಮಾಡುವ ತಪ್ಪಿಗೆ ಎಲ್ಲ ರಾಜಕಾರಣಿಗಳನ್ನು ಅನುಮಾನದಿಂದ ನೋಡುವಂತಾಗಿದೆ. ರಾಜಕಾರಣಿಗಳೆಂದರೆ ಹೀಗೆಯೇ ಎಂದು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಷಾದಿಸಿದರು.
‘ಈ ಸರ್ಕಾರದಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಹೊಸ ಯೋಜನೆಗಳಿಗೆ ಸರ್ಕಾರದ ಬಳಿ ಹಣ ಇಲ್ಲ. ಇರುವ ಯೋಜನೆಗಳನ್ನು ಉಳಿಸಿಕೊಳ್ಳಲೂ ಹಣ ಇಲ್ಲ. ಹಣಕಾಸು ಪರಿಸ್ಥಿತಿ ಬಹಳಷ್ಟು ಕೆಟ್ಟುಹೋಗಿದೆ. ಜನಪರ ಬಜೆಟ್ ಕೊಡಲು ಇವರಿಂದ ಸಾಧ್ಯ ಆಗಲ್ಲ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಯಾವ ಅಂಶಗಳೂ ಕಾರ್ಯಗತವಾಗಿಲ್ಲ. ಸಾಲ ಮನ್ನಾ ಮಾಡುತ್ತೇವೆ ಅಂದರು. ಅದನ್ನೂ ಮಾಡಲಿಲ್ಲ’ ಎಂದರು.
‘₹ 5ಸಾವಿರ ಕೋಟಿ ರೂ ಆವರ್ತ ನಿಧಿ ಇಡುತ್ತೇವೆ ಎಂದರು. ಅದನ್ನೂ ಕೊಟ್ಟಿಲ್ಲ. ಮಾತಿನಲ್ಲಿ ಹೇಳಲು ಚೆನ್ನಾಗಿರುತ್ತೆ, ಆದರೆ ಜಾರಿಯಾಗಲ್ಲ. ಯಡಿಯೂರಪ್ಪ ಅವರ ಮಾತುಗಳನ್ನ ನಂಬಿಕೊಳ್ಳಲು ಆಗುವುದಿಲ್ಲ. ಸುಳ್ಳು ಯಡಿಯೂರಪ್ಪ ಅವರ ಮನೆ ದೇವರು’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು