ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮುಧೋಳದ ತಿಮ್ಮಾಪುರ ಬಳಿಯಿರುವ ಜಿಲ್ಲೆಯ ಏಕೈಕ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದೆ. ಈ ಬೆನ್ನಲ್ಲೇ ಇದೀಗ ಅಧ್ಯಕ್ಷ ರಾಮಣ್ಣ ತಳೇವಾಡ ಸೇರಿದಂತೆ 14ಮಂದಿ ನಿರ್ದೇಶಕರು ರಾಜೀನಾಮೆ ಸಲ್ಲಿಸಿದ್ದಾರೆ.
ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರ ಮುಧೋಳದ ತಿಮ್ಮಾಪುರ ರನ್ನ ನಗರದಲ್ಲಿರುವ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದೆ. ಸಕ್ಕರೆ ಕಾರ್ಖಾನೆ ಸಬಲೀಕರಣಕ್ಕೆ ಮುಂದಾಗದೇ ರಾಜೀನಾಮೆ ಕೊಡುವ ಮೂಲಕ ಅಧ್ಯಕ್ಷ ರಾಮಣ್ಣ ತಳೇವಾಡ, ನಿರ್ದೇಶಕರು ಪಲಾಯನ ಮಾಡಿದ್ದಾರೆ ಎನ್ನಲಾಗಿದೆ.
ಜುಲೈ 16ರಂದು ಅಧ್ಯಕ್ಷ ಸೇರಿ 14 ನಿರ್ದೇಶಕರು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಮೊರಬ ಅವರಿಗೆ ವೈಯಕ್ತಿಕ ಕಾರಣ ಉಲ್ಲೇಖಿಸಿ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅಧ್ಯಕ್ಷರು, ನಿರ್ದೇಶಕರು ರಾಜೀನಾಮೆ ಸಲ್ಲಿಸಿರುವ ಬಗ್ಗೆ ನ್ಯೂಸ್ 18ಗೆ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಮೊರಬ ಖಚಿತಪಡಿಸಿದ್ದಾರೆ.
ಕಾರ್ಖಾನೆ ಬಾಕಿ ಬಿಲ್ ಎಷ್ಟು? ಸಕ್ಕರೆ ಹರಾಜಿನಿಂದ ಬಂದ ಹಣವೆಷ್ಟು?
2019-20ನೇ ಸಾಲಿನ ಹಂಗಾಮಿನಲ್ಲಿ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಸೇರಿದಂತೆ ಜಿಲ್ಲೆಯ 12ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಪೂರೈಸಿದ್ದು, 12 ಸಕ್ಕರೆ ಕಾರ್ಖಾನೆಗಳಿಂದ ಈವರೆಗೆ 106ಕೋಟಿ 77ಲಕ್ಷ ಬಾಕಿ ಬಿಲ್ ಇದೆ. ಜುಲೈ 10ರಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕ ಸಭೆಯಲ್ಲಿ ಬಾಕಿ ಬಿಲ್ ನೀಡುವಂತೆ 15 ದಿನ ಗಡುವು ನೀಡಿಲಾಗಿದೆ.
ಸಭೆ ನಡಾವಳಿಯಲ್ಲಿ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ 30 ಕೋಟಿ, 57 ಲಕ್ಷ ಬಾಕಿ ಉಳಿಸಿಕೊಂಡಿದೆ. ಕಾರ್ಖಾನೆಯಲ್ಲಿರುವ ಸಕ್ಕರೆ ಹರಾಜಿನಿಂದ ರೈತರಿಗೆ ಬಾಕಿ ಬಿಲ್ ಕೊಡಲು ಜಿಲ್ಲಾಡಳಿತ ಸಕ್ಕರೆ ಹರಾಜಿಗೆ ಆದೇಶಿಸಿತ್ತು. ಮುಧೋಳ ತಹಶೀಲ್ದಾರ್ ಸಂಗಮೇಶ ಬಾಡಗಿ ಹೇಳುವಂತೆ 38ಕೋಟಿ ಬಾಕಿ ಬಿಲ್ಲು, ಬಡ್ಡಿ, ಇತರೆ ವೆಚ್ಚ ಸೇರಿ 44 ಕೋಟಿಗೆ ಸಕ್ಕರೆ ಹರಾಜಾಗಿದೆ ಎನ್ನುತ್ತಾರೆ.
ಇನ್ನು ಈಗಾಗಲೇ ಸಕ್ಕರೆ ಹರಾಜಾಗಿ ಸರಬರಾಜು ಆಗುತ್ತಿದೆ. ಹೈಕೋರ್ಟ್ ಆದೇಶ ಬಂದ ಬಳಿಕವಷ್ಟೇ ರೈತರ ಬಾಕಿ ಬಿಲ್ ಪಾವತಿಗೆ ಕ್ರಮವಹಿಸಲಾಗುವುದು ಎಂದು ಮುಧೋಳ ತಹಶೀಲ್ದಾರ್ ಸಂಗಮೇಶ ಬಾಡಗಿ ನ್ಯೂಸ್ 18ಗೆ ತಿಳಿಸಿದ್ದಾರೆ. ಈ ಮಧ್ಯೆ ಕಾರ್ಖಾನೆಗೆ ಸಾಲ ನೀಡಿದ ಬ್ಯಾಂಕ್ನವರು ಹೈಕೋರ್ಟ್ ಮೊರೆ ಹೋಗಿದ್ದು, ಸದ್ಯ ರೈತರ ಬಾಕಿ ಬಿಲ್ ರೈತರ ಕಿಸೆ ಸೇರುವುದು ಡೌಟ್.ಕಾರಜೋಳ ಕಾಳಜಿ ಏಕಿಲ್ಲ?
ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಬಾಕಿ ಬಿಲ್, ಬ್ಯಾಂಕ್ ಸಾಲ ಜೊತೆಗೆ ಕೊರೋನಾ ಸಂಕಷ್ಟದಿಂದ ಸಿಬ್ಬಂದಿಗೆ ಸಂಬಳ ಪಾವತಿಗೂ ದುಸ್ಥಿತಿ ಬಂದಿದೆ. ಸಕ್ಕರೆ ಕಾರ್ಖಾನೆಗೆ ಸರ್ಕಾರದಿಂದ ಅನುದಾನ ಕೇಳಿದರೂ ಸ್ಪಂದನೆ ಇಲ್ಲ. ಇದೇ ಸ್ಥಿತಿ ಮುಂದುವರೆದರೆ ಭವಿಷ್ಯದಲ್ಲಿ ಸಕ್ಕರೆ ಕಾರ್ಖಾನೆ ಖಾಸಗಿಯವರ ಪಾಲಾಗಲಿದೆ ಎನ್ನುವ ಆತಂಕ ಕಬ್ಬು ಬೆಳೆಗಾರರಲ್ಲಿದೆ.
ಇನ್ನು ವಿಪರ್ಯಾಸವೆಂದರೆ ಕಳೆದ 15 ವರ್ಷಗಳಿಂದಲೂ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಗೋವಿಂದ ಕಾರಜೋಳರ ಬೆಂಬಲಿಗರ ಕಪಿಮುಷ್ಟಿಯಲ್ಲಿದೆ. ಒಮ್ಮೆ ಗೋವಿಂದ ಕಾರಜೋಳ ಅಧ್ಯಕ್ಷರಾಗಿದ್ದರು. ಕಾರಜೋಳರು ಅಧ್ಯಕ್ಷರಾಗಿದ್ದ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ವಿಪರ್ಯಾಸ. ಸದ್ಯ ಅವರ ಬೆಂಬಲಿಗರು ನಿರ್ದೇಶಕ ಮಂಡಳಿಗೆ ರಾಜಿನಾಮೆ ನೀಡಿದ್ದಾರೆ.
ಈ ಹಿಂದೆ ಜಿಲ್ಲೆಯಲ್ಲಿ ಖಾಸಗಿಯವರಿಗಿಂತ ಹೆಚ್ಚು ಬೆಲೆ ರೈತರಿಗೆ ನೀಡಿದ ಕಾರ್ಖಾನೆ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಕಾರ್ಖಾನೆ ಪ್ರಸಕ್ತ ವರ್ಷ ಆರಂಭಗೊಳ್ಳುತ್ತದೋ ಇಲ್ಲವೆ ಎನ್ನುವ ಆತಂಕ ರೈತರದ್ದಾಗಿದೆ. ಜಿಲ್ಲೆಯ ಸಹಕಾರಿ ರಂಗದಲ್ಲಿನ ಏಕೈಕ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ದುರದೃಷ್ಟಕರ ಎನ್ನುವ ಮಾತು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ.
ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಡಿಸಿಎಂ ಗೋವಿಂದ ಕಾರಜೋಳ ವಿಶೇಷ ಅನುದಾನ ತರಲು ಏಕೆ ಆಗುತ್ತಿಲ್ಲ. ಪ್ರಭಾವಿ ರಾಜಕಾರಣಿಯಾಗಿದ್ದರೂ ಸರ್ಕಾರ ಮಟ್ಟದಲ್ಲಿ ಪ್ರಭಾವಿ ಬೀರಿ ಮುಳುಗುತ್ತಿರುವ ರನ್ನ ಸಹಕಾರಿ ಕಾರ್ಖಾನೆ ಉಳಿಸಬಹುದು. ಆದರೆ ಗೋವಿಂದ ಕಾರಜೋಳರಿಗೆ ಮನಸ್ಸಿಲ್ಲವೋ ಅಥವಾ ಸರ್ಕಾರದಿಂದ ಅನುದಾನ ತರಲು ಅಸಹಕಾರಾಗಿದ್ದಾರೋ ಗೊತ್ತಿಲ್ಲ. ಆದರೆ ಡಿಸಿಎಂ ಗೋವಿಂದ ಕಾರಜೋಳ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಸಮಸ್ಯೆಗೆ ಸ್ಪಂದಿಸದಕ್ಕೆ ಇದೀಗ ಅಧ್ಯಕ್ಷರು, ನಿರ್ದೇಶಕರು ರಾಜಿನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ 12 ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ವಿಪರ್ಯಾಸ. ಯಾಕೆಂದರೆ ಈ ಸಕ್ಕರೆ ಕಾರ್ಖಾನೆ ಮೂಲಕವೇ ರಾಜಕಾರಣಿಗಳು ರಾಜಕೀಯ ನೆಲೆ ಕಂಡುಕೊಂಡಿದ್ದಾರೆ. ಆದರೆ ಕಾರ್ಖಾನೆ ಸಂಕಷ್ಟಕ್ಕೆ ಸಿಲುಕಿದಾಗ ಅದರ ಪುನಶ್ಚೇತನಕ್ಕೆ ರಾಜಕಾರಣಿಗಳು ಮನಸ್ಸು ತೋರದೇ ಹತ್ತಿದ ಏಣಿ ಒದ್ದಂತೆ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.