Breaking News

ಕುರುಬ ಸಮುದಾಯವನ್ನು ಒಡೆಯುವುದೇ ಬಿಜೆಪಿಯವರ ಮುಖ್ಯ ಉದ್ದೇಶ: ಸಿದ್ದರಾಮಯ್ಯ

Spread the love

ಹುಬ್ಬಳ್ಳಿ: ಕುರುಬ ಸಮುದಾಯವನ್ನು ಒಡೆಯುವುದೇ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರ ಮುಖ್ಯ ಉದ್ದೇಶ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕುರುಬ ಸಮುದಾಯದ ಮೀಸಲಾತಿ ಹೋರಾಟದ ವಿಚಾರವಾಗಿ ಗುರುವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಕುರುಬರ ಮೀಸಲಾತಿ ಹೋರಾಟದಲ್ಲಿ ಆರ್.ಎಸ್.ಎಸ್ ಮತ್ತು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಕುರುಬ ಸಮುದಾಯವನ್ನು ಒಡೆಯುವುದೇ ಅವರ ಮುಖ್ಯ ಉದ್ದೇಶ’ ಎಂದು ಹರಿಹಾಯ್ದಿದ್ದಾರೆ.

‘ಬಿಜೆಪಿ ಮುಖಂಡ ಈಶ್ವರಪ್ಪನವರು ಹೋರಾಟ ಮಾಡುತ್ತಿರೋದು ಯಾರ ವಿರುದ್ಧ? ತಮ್ಮದೇ ಸರ್ಕಾರದ ವಿರುದ್ಧವಲ್ಲವೇ? ಅರ್ಥವಾಗೋಕೆ ಇದಕ್ಕಿಂತ ಹೆಚ್ಚು ಬೇಕಾ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಕುಲಶಾಸ್ತ್ರ ಅಧ್ಯಯನ ಮಾಡುವಂತೆ ನಾನು ಮುಖ್ಯಮಂತ್ರಿಯಾಗಿದ್ದಾಗ ಆದೇಶಿಸಿದ್ದೆ, ಈಗಲೂ ಅಧ್ಯಯನ ನಡೆಯುತ್ತಿದೆ, ಅದು ಮುಗಿದು ವರದಿ ಬಂದ ನಂತರ ಸರ್ಕಾರದ ಮೇಲೆ ಒತ್ತಾಡ ಹೇರಬೇಕು. ಈಗಲೇ ಸಮಾವೇಶಗಳು ಅನಗತ್ಯ ಅನ್ನೋದು ನನ್ನ ಅನಿಸಿಕೆ’ ಎಂದು ಅವರು ಟ್ವೀಟಿಸಿದ್ದಾರೆ.

‘5 ವರ್ಷ ಮುಖ್ಯಮಂತ್ರಿಯಾಗಿ ನಾಡಿನ ಶೋಷಿತ ಸಮುದಾಯಗಳಿಗಾಗಿ ಏನೆಲ್ಲಾ ಕೆಲಸ ಮಾಡಿದ್ದೇನೆ ಎಂದು ಜನರಿಗೆ ಗೊತ್ತು. ನನ್ನ ಕೆಲಸದ ಬಗ್ಗೆ ಸರ್ಟಿಫಿಕೇಟ್ ಕೊಡೋಕೆ ಈಶ್ವರಪ್ಪ ಯಾರು? ಅವರು ಕೊಡುವ ಸರ್ಟಿಫಿಕೇಟ್‌ನ ಅಗತ್ಯ ನನಗಿಲ್ಲ. ತಮ್ಮ ಸರ್ಕಾರ ಏನು ಮಾಡಿದೆ ಎಂದು ಅವರು ಹೇಳಲಿ’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಉಪಚುನಾವಣೆ ನಡೆಯಲಿರುವ ಉತ್ತರ ಕರ್ನಾಟಕದ ಭಾಗಗಳಲ್ಲಿ ಜೆಡಿ(ಎಸ್) ದುರ್ಬಲವಾಗಿದೆ. ಈ ಹಿನ್ನೆಲೆಯಲ್ಲಿ ತಮಗಿರುವ ಅಲ್ಪಸ್ವಲ್ಪ ಬಲವನ್ನು ಬಿಜೆಪಿಗೆ ಧಾರೆಯೆರೆದು ಆ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ’ ಎಂದು ಜೆಡಿಎಸ್‌ ವಿರುದ್ಧವೂ ಅವರು ಕಿಡಿಕಾರಿದ್ದಾರೆ.

ಪರಿಶಿಷ್ಟ ಪಂಗಡದ ಸೌಲಭ್ಯಕ್ಕೆ ಆಗ್ರಹಿಸಿ ಕುರುಬ ಸಮುದಾಯ ನಡೆಸಿದ ಹೋರಾಟ ಯಶಸ್ವಿಯಾಗಿದ್ದನ್ನು ಕಂಡು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಆರೋಪಿಸಿದ್ದಾರೆ.

ಕುರುಬರನ್ನು ಎಸ್‌.ಟಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಜನವರಿ 15 ರಂದು ಕಾಗಿನೆಲೆಯಿಂದ ಆರಂಭವಾಗಿದ್ದ ಪಾದಯಾತ್ರೆ ಮಾದಾವರದ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ(ಬಿಐಇಸಿ) ಮೈದಾನದಲ್ಲಿ ಬೃಹತ್‌ ಸಮಾವೇಶದೊಂದಿಗೆ ಸೋಮವಾರ ಅಂತ್ಯಗೊಂಡಿತ್ತು.


Spread the love

About Laxminews 24x7

Check Also

ಭೂಮಿ‌ ಇರೋವರೆಗೂ ಬಸವಣ್ಣನವರ ವಿಚಾರಧಾರೆಗಳನ್ನ ಕಾಪಾಡಬೇಕು: ಬಸವ ಸಂಸ್ಕೃತಿ ಅಭಿಯಾನದಲ್ಲಿ ಸತೀಶ ಜಾರಕಿಹೊಳಿ

Spread the loveಬೆಳಗಾವಿ: “ಭೂಮಿ ಇರುವವರೆಗೆ ಬಸವಣ್ಣನವರ ವಿಚಾರಗಳನ್ನು ಕಾಪಾಡುವ ಪ್ರಯತ್ನ ಮಾಡಬೇಕಿದೆ. ದೇಶದಲ್ಲಿ ಮೂಲ ವಿಚಾರ ಮತ್ತು ಇತಿಹಾಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ